ಬ್ಯಾಡ್ಮಿಂಟನ್‌: ಪ್ರೀ ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್ ಬರ್ಮಿಂಗ್‌ಹ್ಯಾಮ್: ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪದಕದ ಭರವಸೆ ಎನಿಸಿರುವ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್‌ ಅವರು ಸಿಂಗಲ್ಸ್‌ ವಿಭಾಗದಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಗುರುವಾರ ನಡೆದ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಸಿಂಧು 21–4, 21–11 ರಲ್ಲಿ ಮಾಲ್ಡೀವ್ಸ್‌ನ ಫಾತಿಮಾ ನಬಾ ಅಬ್ದುಲ್‌ ರಜಾಕ್ ಎದುರು ಗೆದ್ದರು. ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆಗೆ ಫಾತಿಮಾ ಅವರು ಸರಿಸಾಟಿಯಾಗಲಿಲ್ಲ. ಸಿಂಧು ಮೊದಲ ಗೇಮ್‌ನಲ್ಲಿ ಎದುರಾಳಿಗೆ ಕೇವಲ ನಾಲ್ಕು ಪಾಯಿಂಟ್‌ ಬಿಟ್ಟುಕೊಟ್ಟರು. ಎರಡನೇ ಗೇಮ್‌ನಲ್ಲಿ ಅಲ್ಪ ಪ್ರತಿರೋಧ ಒಡ್ಡಿದ ಮಾಲ್ಡೀವ್ಸ್‌ನ ಆಟಗಾರ್ತಿ 9–9 ರಲ್ಲಿ ಸಮಬಲ ಸಾಧಿಸಿದರು. ಆ ಬಳಿಕ ಮೇಲಿಂದ ಮೇಲೆ ಪಾಯಿಂಟ್‌ ಕಲೆಹಾಕಿದ ಸಿಂಧು ಗೆಲುವಿನ ನಗು ಬೀರಿದರು. ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್‌ 21–9, 21–9 ರಲ್ಲಿ ಉಗಾಂಡದ ಡೇನಿಯಲ್ ವಾನಗಲಿಯ ಅವರನ್ನು ಮಣಿಸಿದರು. ಕ್ರಾಸ್‌ ಕೋರ್ಟ್‌ ಸ್ಮ್ಯಾಷ್‌ ಮತ್ತು ಡ್ರಾಪ್‌ ಶಾಟ್‌ಗಳ ಮೂಲಕ ಅವರು ಮಿಂಚಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.