ಅಥ್ಲೆಟಿಕ್ಸ್‌: ಸಬ್ಳೆಗೆ 10ನೇ ಸ್ಥಾನ ರಬಾತ್, ಮೊರೊಕ್ಕೊ: ಭಾರತದ ಅವಿನಾಶ್‌ ಸಬ್ಳೆ ಅವರು ಇಲ್ಲಿ ನಡೆದ ಡೈಮಂಡ್‌ ಲೀಗ್‌ ಕೂಟದ ಎರಡನೇ ಲೆಗ್‌ನ 3,000 ಮೀ. ಸ್ಟೀಪಲ್‌ ಚೇಸ್‌ ಸ್ಪರ್ಧೆಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿ 10ನೇ ಸ್ಥಾನ ಪಡೆದರು. 2022ರ ಕಾಮನ್‌ವೆಲ್ತ್‌ ಕೂಟದ ಬೆಳ್ಳಿ ಪದಕ ವಿಜೇತ ಸಬ್ಳೆ, ಭಾನುವಾರ ನಡೆದ ಸ್ಪರ್ಧೆಯನ್ನು 8 ನಿ. 17.18 ಸೆ.ಗಳಲ್ಲಿ ಪೂರೈಸಿದರು. ತಮ್ಮ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆಯ (8 ನಿ. 11.20 ಸೆ.) ಸಮಯಕ್ಕಿಂತ ಆರು ಸೆಕೆಂಡುಗಳಷ್ಟು ತಡವಾಗಿ ಅವರು ಗುರಿ ತಲುಪಿದರು. 28 ವರ್ಷದ ಸಬ್ಳೆ ಕಳೆದ ವರ್ಷ ಇದೇ ಕೂಟದಲ್ಲಿ 8 ನಿ. 12.48 ಸೆ.ಗಳೊಂದಿಗೆ ಐದನೇ ಸ್ಥಾನ ಪಡೆದುಕೊಂಡಿದ್ದರು. ಕಣದಲ್ಲಿದ್ದ 18 ಅಥ್ಲೀಟ್‌ಗಳಲ್ಲಿ 14 ಮಂದಿ ಮಾತ್ರ ಓಟ ಪೂರೈಸಿದರು. ವಿಶ್ವ ಮತ್ತು ಒಲಿಂಪಿಕ್ಸ್‌ ಚಾಂಪಿಯನ್‌ ಆಗಿರುವ ಮೊರೊಕ್ಕೊದ ಸೂಫಿಯಾನ್ ಎಲ್‌ ಬಕಾಲಿ ಅವರು 7 ನಿ. 56.68 ಸೆ.ಗಳೊಂದಿಗೆ ಅಗ್ರಸ್ಥಾನ ಪಡೆದರು. ಇಥಿಯೋಪಿಯದ ಗೆಟ್ನೆಟ್ ವೇಲ್ ಮತ್ತು ಕೆನ್ಯಾದ ಅಬ್ರಹಾಂ ಕಿಬಿವೊಟ್‌ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು. ಸೆಲ್ವಪ್ರಭುಗೆ ಚಿನ್ನ: 18 ವರ್ಷದ ಸೆಲ್ವಪ್ರಭು ತಿರುಮಾರನ್‌ ಅವರು ಗ್ರೀಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಕಾಂಟಿನೆಂಟಲ್‌ ಟೂರ್‌ ಕೂಟದ ಟ್ರಿಪಲ್‌ ಜಂಪ್‌ನಲ್ಲಿ 16.78 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದರು. ಈ ಹಾದಿಯಲ್ಲಿ ಅವರು ತಮ್ಮದೇ ಹೆಸರಿನಲ್ಲಿದ್ದ ಜೂನಿಯರ್‌ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.