ಸಿಂಧು, ಶ್ರೀಕಾಂತ್‌ಗೆ ಪ್ರಶಸ್ತಿ ನಿರೀಕ್ಷೆ ಬ್ಯಾಂಕಾಕ್‌: ಭಾರತದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್‌ ಅವರು ಮಂಗಳವಾರ ಇಲ್ಲಿ ಆರಂಭವಾಗಲಿರುವ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ. ಭಾನುವಾರ ಕೊನೆಗೊಂಡಿದ್ದ ಮಲೇಷ್ಯಾ ಮಾ‌ಸ್ಟರ್ಸ್‌ ಟೂರ್ನಿಯಲ್ಲಿ ಸಿಂಧು ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಎಡವಿದ್ದರೆ, ಶ್ರೀಕಾಂತ್ ಅವರು ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದರು. ಎರಡು ಬಾರಿ ಒಲಿಂಪಿಕ್ಸ್‌ ಪದಕ ಗೆದ್ದಿರುವ ಸಿಂಧು, ಹಲವು ದಿನಗಳಿಂದ ಪ್ರಶಸ್ತಿ ಬರ ಎದುರಿಸುತ್ತಿದ್ದಾರೆ. ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್ಸ್‌ ಟೂರ್ನಿಯ ಫೈನಲ್‌ನಲ್ಲಿ ಅವರು ಸೋತಿದ್ದರು. ಹೈದರಾಬಾದ್‌ನ 27 ವರ್ಷದ ಆಟಗಾರ್ತಿ ಮೊದಲ ಸುತ್ತಿನಲ್ಲಿ ಕೆನಡಾದ ಮಿಷೆಲ್‌ ಲಿ ವಿರುದ್ಧ ಪೈಪೋಟಿ ನಡೆಸುವರು. ಮೊದಲ ಸುತ್ತಿನ ತಡೆ ದಾಟುವಲ್ಲಿ ಯಶಸ್ವಿಯಾದರೆ, ಎರಡನೇ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ಚೀನಾದ ವಾಂಗ್‌ ಜಿ ಯಿ ಎದುರಾಗುವ ಸಾಧ್ಯತೆಯಿದೆ. ಶ್ರೀಕಾಂತ್‌ ಅವರು ಮೊದಲ ಸುತ್ತಿನಲ್ಲಿ ಚೀನಾದ ವೆಂಗ್‌ ಹಾಂಗ್‌ ಯಾಂಗ್‌ ಅವರ ಸವಾಲು ಎದುರಿಸುವರು. ಭಾನುವಾರ ನಡೆದಿದ್ದ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯ ಫೈನಲ್‌ನಲ್ಲಿ ಚೀನಾದ ಆಟಗಾರ, ಭಾರತದ ಎಚ್‌.ಎಸ್‌.ಪ್ರಣಯ್‌ ಕೈಯಲ್ಲಿ ಪರಾಭವಗೊಂಡಿದ್ದರು. ಲಕ್ಷ್ಯ ಸೇನ್‌ ಅವರು ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ವಾಂಗ್‌ ತ್ಸು ವೀ ಅವರ ಸವಾಲು ಎದುರಿಸಲಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಫಾರ್ಮ್‌ ಕಂಡುಕೊಳ್ಳಲು ಪರದಾಡುತ್ತಿರುವ ಲಕ್ಷ್ಯ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ 20 ರಲ್ಲಿ ಸ್ಥಾನ ಕಳೆದುಕೊಂಡಿದ್ದರು. ಪ್ರಿಯಾಂಶು ರಾಜಾವತ್‌ ಅವರು ಮೊದಲ ಸುತ್ತಿನಲ್ಲಿ ಮಲೇಷ್ಯಾದ ಎಂಗ್‌ ತ್ಸೆ ಯಾಂಗ್‌ ಅವರನ್ನು ಎದುರಿಸುವರು. ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಪಾಲ್ಗೊಳ್ಳದಿದ್ದ ಪುರುಷರ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು ಇಲ್ಲಿ ಕಣಕ್ಕಿಳಿಯಲಿದ್ದು, ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.