ಲಾನ್‌ ಬಾಲ್ಸ್‌: ಪುರುಷರ ತಂಡಕ್ಕೆ ಬೆಳ್ಳಿ ಬರ್ಮಿಂಗ್‌ಹ್ಯಾಮ್: ಭಾರತ ಪುರುಷರ ತಂಡದವರು ಲಾನ್‌ ಬಾಲ್ಸ್‌ ಸ್ಪರ್ಧೆಯ ಫೋರ್ಸ್‌ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಶನಿವಾರ ನಡೆದ ಫೈನಲ್‌ನಲ್ಲಿ ಭಾರತ 5–18 ರಲ್ಲಿ ನಾರ್ತರ್ನ್‌ ಐರ್ಲೆಂಡ್‌ ಎದುರು ಪರಾಭವಗೊಂಡಿತು. ಲಾನ್‌ ಬಾಲ್ಸ್‌ನಲ್ಲಿ ಭಾರತಕ್ಕೆ ದೊರೆತ ಎರಡನೇ ಪದಕ ಇದು. ಮಹಿಳಾ ತಂಡದವರು ಫೋರ್ಸ್‌ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಆದರೆ ಪುರುಷರ ತಂಡ ಚಿನ್ನದ ಸಾಧನೆ ಮಾಡಲು ವಿಫಲವಾಯಿತು. ಸುನಿಲ್‌ ಬಹಾದೂರ್‌, ನವನೀತ್‌ ಸಿಂಗ್‌, ಚಂದನ್‌ ಕುಮಾರ್‌ ಸಿಂಗ್‌ ಮತ್ತು ದಿನೇಶ್‌ ಕುಮಾರ್‌ ಅವರನ್ನೊಳಗೊಂಡ ಭಾರತ ತಂಡ ಸೆಮಿಫೈನಲ್‌ನಲ್ಲಿ 13–12 ರಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿತ್ತು. ಫೈನಲ್‌ನಲ್ಲಿ ಭಾರತ ತಂಡ ನಿಖರ ಪ್ರದರ್ಶನ ನೀಡುವಲ್ಲಿ ಎಡವಿತು. ಮೊದಲ ನಾಲ್ಕು ಸುತ್ತುಗಳ ಬಳಿಕ ಬಳಿಕ ಐರ್ಲೆಂಡ್‌ 7–0 ರಲ್ಲಿ ಮುನ್ನಡೆ ಪಡೆಯಿತು. ಭಾರತಕ್ಕೆ ಖಾತೆ ತೆರೆಯಲು ಆಗಲಿಲ್ಲ. ಐದು ಸುತ್ತುಗಳ ಬಳಿಕ ಭಾರತಕ್ಕೆ ಮೊದಲ ಪಾಯಿಂಟ್‌ ಲಭಿಸಿತು. 10 ಸುತ್ತುಗಳು ಕೊನೆಗೊಂಡಾಗ ಐರ್ಲೆಂಡ್‌ 12–5 ರಲ್ಲಿ ಮೇಲುಗೈ ಸಾಧಿಸಿತು. ನಿಖರ ಪ್ರದರ್ಶನ ಮುಂದುವರಿಸಿದ ಸಾಮ್ ಬರ್ಕ್ಲೆ, ಆ್ಯಡಮ್‌ ಮೆಕೋವನ್, ಇಯಾನ್‌ ಮೆಕ್‌ಲೂರ್‌ ಮತ್ತು ಮಾರ್ಟಿನ್‌ ಮೆಕ್‌ಹ್ಯೂ ಅವರು ಮತ್ತೆ ಆರು ಪಾಯಿಂಟ್‌ ಕಲೆಹಾಕಿ ಚಿನ್ನ ತಮ್ಮದಾಗಿಸಿಕೊಂಡರು. ನಾರ್ತರ್ನ್‌ ಐರ್ಲೆಂಡ್‌ ಲಾನ್‌ ಬಾಲ್ಸ್‌ನಲ್ಲಿ 1998ರ ಬಳಿಕ ಇದೇ ಮೊದಲ ಬಾರಿ ಚಿನ್ನ ಗೆದ್ದ ಸಾಧನೆ ಮಾಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.