ವಿಶ್ವ ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌: ಸಾತ್ವಿಕ್‌– ಚಿರಾಗ್‌ಗೆ 4ನೇ ಸ್ಥಾನ ನವದೆಹಲಿ: ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ವಿಶ್ವ ಬ್ಯಾಡ್ಮಿಂಟನ್‌ನ ಪುರುಷರ ಡಬಲ್ಸ್‌ ವಿಭಾಗದ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೃತ್ತಿಜೀವನದ ಶ್ರೇಷ್ಠ ರ್‍ಯಾಂಕ್‌ ಆಗಿದೆ. ಕಳೆದ ವರ್ಷ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ಫ್ರೆಂಚ್‌ ಓಪನ್‌ ಸೂಪರ್‌ 750 ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಸಾತ್ವಿಕ್‌– ಚಿರಾಗ್‌, ಈ ವರ್ಷ ಸ್ವಿಸ್‌ ಸೂಪರ್ ಸೀರಿಸ್‌ 300 ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಕಳೆದ ವಾರ ನಡೆದಿದ್ದ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಚಾಂಪಿಯನ್‌ ಎಚ್‌.ಎಸ್‌.ಪ್ರಣಯ್‌ ಅವರು ಒಂದು ಕ್ರಮಾಂಕ ಮೇಲಕ್ಕೇರಿದ್ದು, 8ನೇ ಸ್ಥಾನ ಗಳಿಸಿದ್ದಾರೆ. ಕೆ.ಶ್ರೀಕಾಂತ್‌ ಮೂರು ಸ್ಥಾನ ಮೇಲಕ್ಕೇರಿ 20ನೇ ರ್‍ಯಾಂಕ್‌ ಪಡೆದಿದ್ದಾರೆ. ಆದರೆ ಲಕ್ಷ್ಯ ಸೇನ್‌ ಒಂದು ಕ್ರಮಾಂಕ ಕುಸಿತ ಕಂಡಿದ್ದು, 23ನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ಸಿಂಗಲ್ಸ್‌ ವಿಭಾಗದ ರ್‍ಯಾಂಕಿಂಗ್‌ನಲ್ಲಿ ಪಿ.ವಿ.ಸಿಂಧು 13ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.