ಚೆಸ್‌: ಪ್ರಗ್ನಾನಂದ ಗೆಲುವಿನ ಹ್ಯಾಟ್ರಿಕ್ ಮಿಯಾಮಿ (ಪಿಟಿಐ): ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಗ್ನಾನಂದ ಅವರು ಎಫ್‌ಟಿಎಕ್ಸ್‌ ಕ್ರಿಪ್ಟೊ ಕಪ್‌ ಚೆಸ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ಪಡೆದರು. ಗುರುವಾರ ನಡೆದ ಮೂರನೇ ಸುತ್ತಿನಲ್ಲಿ ಅವರು 2.5–1.5 ಪಾಯಿಂಟ್‌ಗಳಿಂದ ಹ್ಯಾನ್ಸ್‌ ನೀಮನ್‌ ಎದುರು ಗೆದ್ದರು. ನಾಲ್ಕು ರ‍್ಯಾಪಿಡ್‌ ಪಂದ್ಯಗಳ ಮೊದಲ ಹಣಾಹಣಿಯಲ್ಲಿ ಪ್ರಗ್ನಾನಂದ ಅವರು ನೀಮನ್‌ ಎದುರು ಸೋತರು. ಆದರೆ ಎರಡನೇ ಮತ್ತು ನಾಲ್ಕನೇ ಗೇಮ್‌ಗಳಲ್ಲಿ ಗೆದ್ದ ಅವರು ಮೂರನೇ ಗೇಮ್‌ಅನ್ನು ಡ್ರಾ ಮಾಡಿಕೊಂಡು ಪೂರ್ಣ ಪಾಯಿಂಟ್ಸ್ ಗಿಟ್ಟಿಸಿಕೊಂಡರು. ಈ ಗೆಲುವಿನ ಮೂಲಕ 17 ವರ್ಷದ ಪ್ರಗ್ನಾನಂದ, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಜತೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಕಾರ್ಲ್‌ಸನ್‌ ಮೂರನೇ ಸುತ್ತಿನಲ್ಲಿ 2.5–1.5 ರಿಂದ ಲೆವೊನ್‌ ಅರೊನಿಯನ್‌ ಅವರನ್ನು ಮಣಿಸಿದರು. ಪ್ರಗ್ನಾನಂದ ಮೊದಲ ಎರಡು ಸುತ್ತುಗಳಲ್ಲಿ ಕ್ರಮವಾಗಿ ಅಲಿರೆಜಾ ಫಿರೊಜಾ ಮತ್ತು ಅನೀಶ್‌ ಗಿರಿ ಅವರನ್ನು ಸೋಲಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.