ಬ್ಯಾಡ್ಮಿಂಟನ್‌: ಪ್ರೀಕ್ವಾರ್ಟರ್‌ಗೆ ಪ್ರಣಯ್‌ ಒಸಾಕ, ಜಪಾನ್‌: ಭಾರತದ ಎಚ್‌.ಎಸ್‌. ಪ್ರಣಯ್ ಅವರು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಂಗಳವಾರ ಪ್ರೀಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಇಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದ ವೇಳೆ ಅವರ ಎದುರಾಳಿ ಎನ್‌ಜಿ ಕಾ ಲಾಂಗ್ ಆ್ಯಗ್ನಸ್ ಹಿಂದೆ ಸರಿದ ಕಾರಣ ಪ್ರಣಯ್‌ ಮುನ್ನಡೆದರು. ಪಂದ್ಯದ ಮೊದಲ ಗೇಮ್‌ನಲ್ಲಿ ಪ್ರಣಯ್‌ 11–10ರಿಂದ ಮುಂದಿದ್ದ ವೇಳೆ ಹಾಂಗ್‌ಕಾಂಗ್‌ನ ಆ್ಯಗ್ನಸ್ ಗಾಯಗೊಂಡು ನಿವೃತ್ತರಾದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿರುವ ಪ್ರಣಯ್, ಮುಂದಿನ ಪಂದ್ಯದಲ್ಲಿ ಸಿಂಗಪುರದ ಲೊಹ್ ಕೀನ್ ಯಿವ್ ಎದುರು ಆಡುವರು. ಲೊಹ್‌ ಮಾಜಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಸದ್ಯ ಉತ್ತಮ ಲಯದಲ್ಲಿರುವ ಪ್ರಣಯ್‌, ಕಳೆದ ವಾರ ಕೊನೆಗೊಂಡ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಜಪಾನ್‌ನ ಕೆಂಟೊ ಮೊಮೊಟಾ ಅವರನ್ನು ಮಣಿಸಿದ್ದರು. ಬಳಿಕ ಭಾರತದವರೇ ಆದ ಲಕ್ಷ್ಯ ಸೇನ್ ಸವಾಲು ಮೀರಿದ್ದರು. ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಚೀನಾದ ಜಾವೊ ಜುನ್‌ಪೆಂಗ್ ಎದುರು ನಿರಾಸೆ ಅನುಭವಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.