ರೂರ್ಕೆಲಾದಲ್ಲಿ ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯ ನವದೆಹಲಿ (ಪಿಟಿಐ): ಮುಂಬರುವ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯ ಕೆಲವು ಪಂದ್ಯಗಳಿಗೆ ಅತಿಥ್ಯ ವಹಿಸುವ ಅವಕಾಶ ಒಡಿಶಾದ ರೂರ್ಕೆಲಾಗೆ ಲಭಿಸಿದೆ. ಭುವನೇಶ್ವರದ ಜತೆ ರೂರ್ಕೆಲಾದಲ್ಲೂ ಪಂದ್ಯಗಳನ್ನು ಆಯೋಜಿಸಲು ಟೂರ್ನಿಯ ಸಂಘಟಕರು ನಿರ್ಧರಿಸಿದ್ದಾರೆ. ಪುರುಷರ ವಿಶ್ವಕಪ್‌ ಹಾಕಿ ಟೂರ್ನಿಯನ್ನು ಆಯೋಜಿಸಲು ಹೊಸದಾಗಿ ನಿರ್ಮಿಸಿರುವ ಕ್ರೀಡಾಂಗಣದಲ್ಲಿ ಪ್ರೊ ಲೀಗ್‌ನ ಪಂದ್ಯಗಳು ನಡೆಯಲಿವೆ. ಮುಂದಿನ ವರ್ಷ ಜ.13 ರಿಂದ 29ರ ವರೆಗೆ ಭಾರತದಲ್ಲಿ ವಿಶ್ವಕಪ್‌ ನಡೆಯಲಿದ್ದು, ಕೆಲವು ಪಂದ್ಯಗಳನ್ನು ಆಯೋಜಿಸಲು ರೂರ್ಕೆಲಾದಲ್ಲಿ ಅತ್ಯಾಧುನಿಕ ಕ್ರೀಡಾಂಗಣ ನಿರ್ಮಿಸಲಾಗಿದೆ. ಪ್ರೊ ಲೀಗ್‌ನ ಹೆಚ್ಚಿನ ಪಂದ್ಯಗಳು ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವಕಪ್‌ ಟೂರ್ನಿಯ ಪಂದ್ಯಗಳೂ ಈ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ. ಎಫ್‌ಐಎಚ್‌ ಪ್ರೊ ಲೀಗ್‌ 2022ರ ಅ.28 ರಿಂದ 2023ರ ಜುಲೈ 5ರ ವರೆಗೆ ನಡೆಯಲಿದೆ. ಭಾರತದ ಎರಡು ತಾಣಗಳಲ್ಲದೆ ಆಸ್ಟ್ರೇಲಿಯಾದ ನ್ಯೂಕ್ಯಾಸಲ್‌ ಮತ್ತು ಹೋಬರ್ಟ್‌, ಅರ್ಜೆಂಟಿನಾದ ಮೆಂಡೋಜಾ ಮತ್ತು ಸಾಂಟಿಯಾಗೊ ಡೆಲ್‌ ಎಸ್ಟೆರೊ, ಬೆಲ್ಜಿಯಂನ ಆ್ಯಂಟ್‌ವರ್ಪ್‌, ಲಂಡನ್‌, ನೆದರ್ಲೆಂಡ್ಸ್‌ನ ಐಂಡ್‌ಹೋವನ್‌ ಮತ್ತು ಆಮ್‌ಸ್ಟರ್‌ಡ್ಯಾಂ, ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ ಮತ್ತು ವೆಲಿಂಗ್ಟನ್‌ನಲ್ಲಿ ಪಂದ್ಯಗಳು ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.