ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ ನವದೆಹಲಿ (ಪಿಟಿಐ): ಒಲಿಂಪಿಕ್‌ ಚಾಂಪಿಯನ್‌ ಜಾವೆಲಿನ್‌ ಥ್ರೋ ಸ್ಪರ್ಧಿ ಭಾರತದ ನೀರಜ್‌ ಚೋಪ್ರಾ ಅವರು ಸ್ವಿಟ್ಜರ್‌ಲೆಂಡ್‌ನ ಲಾಸನ್‌ನಲ್ಲಿ ಆ.26 ರಂದು ನಡೆಯಲಿರುವ ಡೈಮಂಡ್‌ ಲೀಗ್‌ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮೆರಿಕದ ಯೂಜಿನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ ವೇಳೆ ಗಾಯಗೊಂಡಿದ್ದ ನೀರಜ್‌, ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್‌ ಕೂಟದಿಂದ ಹಿಂದೆ ಸರಿದಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಲಾಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಚೋಪ್ರಾ ಅವರಿಗೆ ಸೆ.7 ಮತ್ತು 8 ರಂದು ಜ್ಯೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ಲಭಿಸಲಿದೆ. ವಿಶ್ವದ ಅಗ್ರ ಆರು ಸ್ಪರ್ಧಿಗಳು ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಪಾಲ್ಗೊಳ್ಳುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.