ಸೇನ್‌ ಮುನ್ನಡೆ; ಶ್ರೀಕಾಂತ್‌ಗೆ ಆಘಾತ ಟೋಕಿಯೊ: ಎದುರಾಳಿಯನ್ನು ನೇರ ಗೇಮ್‌ಗಳಿಂದ ಮಣಿಸಿದ ಭಾರತದ ಲಕ್ಷ್ಯ ಸೇನ್‌ ಅವರು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಪ್ರೀಕ್ವಾರ್ಟರ್‌ಫೈನಲ್ ತಲುಪಿದರು. ಆದರೆ ಕಿದಂಬಿ ಶ್ರೀಕಾಂತ್‌ ಆಘಾತ ಅನುಭವಿಸಿದರು. ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಲಕ್ಷ್ಯ 21–17, 21–10ರಿಂದ ಸ್ಪೇನ್‌ನ ಲೂಯಿಸ್‌ ಪೆನಾಲ್ವರ್ ಅವರನ್ನು ಸೋಲಿಸಿದರು., ಕಾಮನ್‌ವೆಲ್ತ್‌ ಗೇಮ್ಸ್ ಚಾಂಪಿಯನ್‌, 72 ನಿಮಿಷಗಳಲ್ಲಿ ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು. ಮೊದಲ ಗೇಮ್‌ನ ಆರಂಭದಲ್ಲಿ 3–4ರಿಂದ ಹಿನ್ನಡೆಯಲ್ಲಿದ್ದ ಲಕ್ಷ್ಯ, ಬಳಿಕ ತಿರುಗೇಟು ನೀಡಿ 13–7ರಿಂದ ಮುನ್ನಡೆ ಸಾಧಿಸಿದರು. ಅದೇ ಲಯದೊಂದಿಗೆ ಮುನ್ನುಗ್ಗಿ ಗೇಮ್ ತಮ್ಮದಾಗಿಸಿಕೊಂಡರು. ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಲಕ್ಷ್ಯ, ಎರಡನೇ ಗೇಮ್‌ನಲ್ಲಿ ಮತ್ತಷ್ಟು ಪರಿಣಾಮಕಾರಿ ಎನಿಸಿದರು. ಗೇಮ್‌ನ ಮೊದಲ ಆರು ಪಾಯಿಂಟ್‌ಗಳನ್ನು ಇಬ್ಬರೂ ಆಟಗಾರರು ಹಂಚಿಕೊಂಡರು. ಬಳಿಕ ಲಕ್ಷ್ಯ ಪಾರಮ್ಯ ಮೆರೆದರು. ಒಂದು ಹಂತದಲ್ಲಿ ಒಂಬತ್ತು ಪಾಯಿಂಟ್‌ ಅಂತರ ಸಾಧಿಸಿದ ಅವರು ಬಳಿಕ ತಿರುಗಿ ನೋಡಲಿಲ್ಲ. ಹೋದ ಆವೃತ್ತಿಯಲ್ಲಿ ಬೆಳ್ಳಿ ಜಯಿಸಿದ್ದ ಕಿದಂಬಿ ಶ್ರೀಕಾಂತ್, ಎರಡನೇ ಸುತ್ತಿನ ಪಂದ್ಯದಲ್ಲಿ 18–21, 17–21ರಿಂದ ಚೀನಾದ ಜಾವೊ ಚುನ್ ಪೆಂಗ್ ಎದುರು ಎಡವಿದರು. ಕೇವಲ 34 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು. ಮೊದಲ ಗೇಮ್‌ಅನ್ನು ಕೇವಲ 12 ನಿಮಿಷಗಳಲ್ಲಿ ಕಳೆದುಕೊಂಡ ಶ್ರೀಕಾಂತ್‌, ಎರಡನೇ ಗೇಮ್‌ಅನ್ನು ಸ್ವಯಂಕೃತ ತಪ್ಪುಗಳಿಂದ ಕೈಚೆಲ್ಲಿದರು. ಒಂದು ಹಂತದಲ್ಲಿ 16–14ರಿಂದ ಮುನ್ನಡೆ ಸಾಧಿಸಿದರೂ, ಗೆಲುವು ಸಾಧ್ಯವಾಗಲಿಲ್ಲ. ಅರ್ಜುನ್‌–ಧ್ರುವ ಮುನ್ನಡೆ: ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್– ಧ್ರುವ ಕಪಿಲ ಜೋಡಿಯೂ ಪ್ರೀಕ್ವಾರ್ಟರ್‌ಫೈನಲ್ ತಲುಪಿತು. ಭಾರತದ ಆಟಗಾರರು21-17, 21-16ರಿಂದ ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದ ಡೆನ್ಮಾರ್ಕ್‌ನ ಕಿಮ್ ಅಸ್ಟ್ರುಪ್‌– ಆ್ಯಂಡ್ರೆಸ್‌ ಸ್ಕರೂಪ್‌ ರಾಸ್ಮಸನ್ ಎದುರು ಗೆದ್ದರು. ಮಹಿಳಾ ಡಬಲ್ಸ್‌ನ ಎರಡನೇ ಸುತ್ತಿನಲ್ಲಿ ಅಶ್ವಿನಿ ಪೊನ್ನಪ್ಪ– ಎನ್‌.ಸಿಕ್ಕಿರೆಡ್ಡಿ 15–21, 10–21ರಿಂದ ಚೀನಾದ ಚೆನ್‌ ಕಿಂಗ್‌ ಚೆನ್‌– ಜಿಯಾ ಯಿ ಫಾನ್‌ ವಿರುದ್ಧ ಸೋತರು. ಪೂಜಾ ದಂಡು–ಸಂಜನಾ ಸಂತೋಷ್‌ ಕೂಡ15-21, 7-21ರಿಂದ ಕೊರಿಯಾದ ಶಿನ್‌ ಸೆಯುಂಗ್‌– ಲೀ ಸೊ ಹೀ ಎದುರು ಮುಗ್ಗರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.