ಪಂಚಾಯಿತಿಮಟ್ಟದಲ್ಲಿ ಗ್ರಾಮೀಣ ಕ್ರೀಡೆಗಳ ಸುಗ್ಗಿ ಬೆಂಗಳೂರು: ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿ ಎತ್ತಿನ ಗಾಡಿ, ಕಬಡ್ಡಿ, ಕೊಕ್ಕೊ ಕ್ರೀಡೆಗಳನ್ನು ಆಯೋಜಿಸಲು ಸರ್ಕಾರ ಮುಂದಾಗಿದೆ. ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೆ ನಡೆಯುವ ಈ ಸ್ಪರ್ಧೆಗಳನ್ನುಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್‌ ರಾಜ್‌ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿಯಾಗಿ ಆಯೋಜಿಸಲಿವೆ. ವಯೋಮಿತಿ ಇಲ್ಲದ ಮುಕ್ತ ಕ್ರೀಡಾಕೂಟ ಇದಾಗಿದ್ದು,ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಎಲ್ಲ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.ಕ್ರೀಡಾಕೂಟಕ್ಕೆ ಅಗತ್ಯವಿರುವ ತಾಂತ್ರಿಕ ನೆರವನ್ನು ಕ್ರೀಡಾ ಇಲಾಖೆ ನೀಡಲಿದೆ. ಇದೇ ಮೊದಲ ಬಾರಿ ಈ ರೀತಿಯ ಕ್ರೀಡಾ ಸ್ಪರ್ಧೆಗಳನ್ನು ದೊಡ್ಡ ಪ್ರಮಾಣದಲ್ಲಿ ವ್ಯವಸ್ಥಿತವಾಗಿ ಆಯೋಜಿಸಲಾಗುತ್ತಿದೆ. ಉದ್ಯೋಗ ಖಾತ್ರಿ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಮೈದಾನಗಳಲ್ಲಿಯೂ ಕ್ರೀಡಾಕೂಟಗಳನ್ನು ‌ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಪರ್ಧೆಗಳನ್ನು ಯಾವ ರೀತಿಆಯೋಜಿಸಬೇಕು ಎನ್ನುವ ವಿವರಗಳ ಕುರಿತು ಇಲಾಖೆ ಸುತ್ತೋಲೆ ಹೊರಡಿಸಿದೆ. ಗ್ರಾಮ ಪಂಚಾಯಿತಿಗಳು ಶೇ 2ರಷ್ಟು ಆದಾಯವನ್ನು ಈ ಕ್ರೀಡೆಗಳನ್ನು ಆಯೋಜಿಸಲು ಬಳಸಬಹುದು. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಜಿಲ್ಲಾ ಪಂಚಾಯಿತಿಗಳ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ನೀಡುವ ಅನುದಾನವನ್ನು ಬಳಸಲು ಸೂಚಿಸಲಾಗಿದೆ. ತಾಲ್ಲೂಕುಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ₹200 ಮತ್ತು ಜಿಲ್ಲಾಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ₹250 ನೀಡಲು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ತಲಾ ₹300 ಅನ್ನು ಉಪಾಹಾರ, ಭೋಜನಕ್ಕೆ ನೀಡುವಂತೆ ಸೂಚಿಸಲಾಗಿದೆ. ಮೂರು ತಾಲ್ಲೂಕುಗಳಿಂತಲೂ ಕಡಿಮೆ ಇರುವ ಜಿಲ್ಲೆಗಳಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದವರ ಹೆಸರುಗಳನ್ನು ಜಿಲ್ಲಾಮಟ್ಟಕ್ಕೆ ಕಳುಹಿಸಬೇಕು.ನಾಲ್ಕರಿಂದ ಐದು ತಾಲ್ಲೂಕುಗಳಿರುವ ಜಿಲ್ಲೆಗಳು ಎರಡು ತಂಡಗಳನ್ನು ಮಾತ್ರಕಳುಹಿಸಬೇಕು. ಆರು ಅಥವಾ ಅದಕ್ಕಿಂತಲೂ ಹೆಚ್ಚು ತಾಲ್ಲೂಕುಗಳು ಇರುವ ಜಿಲ್ಲೆಗಳು ಮೊದಲ ಸ್ಥಾನ ಪಡೆದ ತಂಡಗಳನ್ನು ಮಾತ್ರ ಕಳುಹಿಸಬೇಕು. ಜಿಲ್ಲಾಮಟ್ಟದಲ್ಲಿ ಮೊದಲ ಸ್ಥಾನ ಪಡೆದವರಿಗೆ ಮಾತ್ರ ರಾಜ್ಯಮಟ್ಟದಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮೀಣ ಕ್ರೀಡಾಕೂಟವನ್ನು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಆಯೋಜಿಸುವುದನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ‘ದೇಶಿ ಕ್ರೀಡೆಗಳಿಗೆ ಪ್ರೋತ್ಸಾಹದ ಆಶಯ’ ‘ಪಾರಂಪರಿಕ ಮತ್ತು ದೇಶಿಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು’ ಎಂದು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ತಿಳಿಸಿದ್ದಾರೆ. ‘ಈ ಕ್ರೀಡೆಗಳಲ್ಲಿ ವಯೋಮಿತಿಯನ್ನು ಸಹ ನಿಗದಿಪಡಿಸಿಲ್ಲ. ಗ್ರಾಮೀಣ ಕ್ರೀಡಾಕೂಟಕ್ಕೆ ಸ್ಥಳೀಯವಾಗಿ ಜನಪ್ರಿಯವಾಗಿರುವ ಕ್ರೀಡೆಗಳನ್ನೇ ಆಯ್ಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಆರೋಗ್ಯ ರಕ್ಷಣೆಯ ಬಗ್ಗೆಯೂ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುವುದು’ ಎಂದು ವಿವರಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.