ಎನ್‌ಐಟಿಕೆ, ಎಂಐಟಿ ತಂಡಗಳ ಜಯಭೇರಿ ಮಂಗಳೂರು: ಸುರತ್ಕಲ್‌ನ ಎನ್‌ಐಟಿಕೆ ಮತ್ತು ಮಣಿಪಾಲದ ಎಂಐಟಿ ತಂಡಗಳು ದಕ್ಷಿಣ ಕನ್ನಡ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ಆಯೋಜಿಸಿರುವ ಜೇಮ್ಸ್ ನೈಸ್ಮಿತ್ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಭರ್ಜರಿ ಜಯ ಸಾಧಿಸಿದವು. ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನದ ಪುರುಷರ ಲೀಗ್ ಪಂದ್ಯದಲ್ಲಿ ಸೋಹನ್ ಗಳಿಸಿದ 13 ಪಾಯಿಂಟ್‌ಗಳ ಬಲದಿಂದ ಎನ್‌ಐಟಿಕೆ ತಂಡ ಸೇಂಟ್ ಅಲೋಶಿಯಸ್ ಪಿಯು ಕಾಲೇಜು ತಂಡವನ್ನು 27–21ರಲ್ಲಿ ಮಣಿಸಿತು. ವಿರಾಮದ ವೇಳೆ 12–15ರ ಹಿನ್ನಡೆಯಲ್ಲಿದ್ದ ಎನ್‌ಐಟಿಕೆ ಮೂರು ಮತ್ತು ನಾಲ್ಕನೇ ಕ್ವಾರ್ಟರ್‌ಗಳಲ್ಲಿ ತಿರುಗೇಟು ನೀಡಿತು. ಅಲೋಶಿಯಸ್ ಪರ ಜೋಶುವಾ ಗಳಿಸಿದ 7 ಪಾಯಿಂಟ್‌ ವ್ಯರ್ಥವಾದವು. ಮತ್ತೊಂದು ಪಂದ್ಯದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಸೇಂಟ್ ಕ್ಲಾರೆಟ್ ತಂಡ, ಕೆಎಂಸಿ ವಿರುದ್ಧ 53–26ರಲ್ಲಿ ಜಯ ಗಳಿಸಿತು. ದಿನೇಶ್ 18 ಪಾಯಿಂಟ್ ಗಳಿಸಿ ಕ್ಲಾರೆಟ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಹಿಳೆಯರ ವಿಭಾಗದ ನಿಟ್ಟೆ ವಿವಿ ಎದುರಿನ ಪಂದ್ಯದಲ್ಲಿ ಎಂಐಟಿ ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿತು. ಹೀಗಾಗಿ ಮೊದಲಾರ್ಧದಲ್ಲಿ 22–10ರ ಮುನ್ನಡೆ ಸಾಧಿಸಲು ತಂಡಕ್ಕೆ ಸಾಧ್ಯವಾಯಿತು. ದ್ವಿತೀಯಾರ್ಧದಲ್ಲಿ ಎದುರಾಳಿ ತಂಡಕ್ಕೆ 2 ಪಾಯಿಂಟ್ ಮಾತ್ರ ಬಿಟ್ಟುಕೊಟ್ಟ ತಂಡ 37–12ರಲ್ಲಿ ಜಯ ಗಳಿಸಿತು. ಮಾನಸ 12 ಪಾಯಿಂಟ್ ಕಲೆ ಹಾಕಿದರು. ನಿಟ್ಟೆ ಪರ ಪ್ರಾರ್ಥನಾ 10 ಪಾಯಿಂಟ್ ಗಳಿಸಿದರು. ಮಿಂಚಿದನಹನ್‌, ಡೇಲ್‌, ಧನ್ವಿ ಹೈಸ್ಕೂಲ್‌ ವಿಭಾಗದಲ್ಲಿಮೌಂಟ್ಕಾರ್ಮೆಲ್ಮತ್ತುಮಣಿಪಾಲಸಂಸ್ಥೆಯತಂಡದವರು ಭರ್ಜರಿಜಯಗಳಿಸಿದರು. ಬಾಲಕರ ವಿಭಾಗದ ಲೀಗ್‌ ಪಂದ್ಯದಲ್ಲಿ ಡೇಲ್ ಗಳಿಸಿದ 20 ಪಾಯಿಂಟ್‌ಗಳ ಬಲದಿಂದ ಮೌಂಟ್ ಕಾರ್ಮೆಲ್‌ 47–8ರಲ್ಲಿ ಸೇಂಟ್ ಥೆರೆಸಾ ಶಾಲೆ ತಂಡವನ್ನು ಮಣಿಸಿತು. ಥೆರೆಸಾ ಪರವಾಗಿ ಇಶಾನ್ ಆರು ಪಾಯಿಂಟ್ ಕಲೆ ಹಾಕಿದರು. ಬಾಲಕಿಯರ ವಿಭಾಗದಲ್ಲಿ ಮಣಿಪಾಲ ತಂಡ 42–15ರಲ್ಲಿ ಕೇಂಬ್ರಿಜ್‌ ತಂಡವನ್ನು ಸೋಲಿಸಿತು. ಮಣಿಪಾಲ ತಂಡಕ್ಕಾಗಿ ಧನ್ವಿ 20, ಕೇಂಬ್ರಿಜ್ ಪರವಾಗಿ ವೈಷ್ಣವಿ 13 ಪಾಯಿಂಟ್ ಗಳಿಸಿದರು. ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಲೂರ್ದ್ಸ್‌ ಕೇಂದ್ರೀಯ ಶಾಲೆ ತಂಡ 31–5ರಲ್ಲಿ ಸೇಂಟ್ ಅಲೋಶಿಯಸ್ ತಂಡವನ್ನು ಸೋಲಿಸಿತು. 22 ಪಾಯಿಂಟ್ ಗಳಿಸಿದ ನಹನ್ ಅವರು ವಿಜಯಿ ತಂಡದ ಪರ ಮಿಂಚಿದರು. ಸಿದ್ಧಾಂತ್ ಮತ್ತು ಪ್ರದಿಲ್ ಗಳಿಸಿದ ತಲಾ 13 ಪಾಯಿಂಟ್‌ಗಳ ನೆರವಿನಿಂದ ಕೇಂಬ್ರಿಜ್ ಶಾಲೆ ತಂಡ ಸೇಂಟ್ ಅಲೋಶಿಯಸ್ ತಂಡವನ್ನು 28–15ರಲ್ಲಿ ಸೋಲಿಸಿತು. ಬಾಲಕಿಯರ ವಿಭಾಗದಲ್ಲಿ ಅತಿಥಿಯಾಗಿ ಬಂದಿದ್ದ ಬೆಂಗಳೂರಿನ ಜೆಎಸ್‌ಎಸ್‌ ತಂಡ ಲೂರ್ದ್ಸ್‌ ವಿರುದ್ಧ 29–6ರಲ್ಲಿ ಜಯ ಗಳಿಸಿತು. ಜೆಎಸ್‌ಎಸ್‌ ಪರ ನಿವೃತಿ 9 ಪಾಯಿಂಟ್ ಕಲೆ ಹಾಕಿದರು. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಲೂರ್ದ್ಸ್‌ ತಂಡ 12–7ರಲ್ಲಿ ಮೌಂಟ್ ಕಾರ್ಮೆಲ್ ತಂಡವನ್ನು ಸೋಲಿಸಿತು.ಲೂರ್ದ್ಸ್‌ಗಾಗಿ ಶಾಶ್ವತ್‌ 12 ಪಾಯಿಂಟ್ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಲೂರ್ದ್ಸ್‌ ತಂಡ 14–12ರಲ್ಲಿ ಕೇಂಬ್ರಿಜ್ ವಿರುದ್ಧ ಗೆಲುವು ಸಾಧಿಸಿತು. ವಿಜಯಿ ತಂಡಕ್ಕಾಗಿ ಇವಾನ 8 ಪಾಯಿಂಟ್ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.