ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗೆ ಅರ್ಜುನ್‌: ಸೆ.10ರಿಂದ 18ರವರೆಗೆ ಟೂರ್ನಿ ದಾವಣಗೆರೆ: ಭಾರತೀಯ ಸೇನೆಯ ಯೋಧ, ಬಾಗಲಕೋಟೆ ಜಿಲ್ಲೆಯ ಬೇವಿನಮಟ್ಟಿಯ ಅರ್ಜುನ್‌ ಹಲಕುರ್ಕಿ ಅವರು ಬೆಲ್‌ಗ್ರೇಡ್‌ನಲ್ಲಿ ಸೆ.10ರಿಂದ 18ರವರೆಗೆ ನಡೆಯಲಿರುವ ಸೀನಿಯರ್‌ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಗ್ರಿಕೊ ರೋಮನ್‌ ಸ್ಟೈಲ್‌ನ 55 ಕೆ.ಜಿ. ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗೆ ಭಾರತದ ಕುಸ್ತಿಪಟುಗಳ ಆಯ್ಕೆಗೆ ಹರಿಯಾಣದ ಸೋನಿಪಥ್‌ನಲ್ಲಿ ಮಂಗಳವಾರ ಟ್ರಯಲ್ಸ್‌ ನಡೆಯಿತು. ಅರ್ಜುನ್‌ ಅವರು ಆಡಿದ ಮೂರು ಪಂದ್ಯಗಳಲ್ಲೂ ಎದುರಾಳಿಗಳನ್ನು ಮಣಿಸುವ ಮೂಲಕ ರಾಷ್ಟ್ರೀಯ ತಂಡದಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದುಕೊಂಡರು. ಮೊದಲ ಪಂದ್ಯದಲ್ಲಿ ಅವರು 8–0 ರಲ್ಲಿ ಹರಿಯಾಣದ ಶ್ರವಣ್‌ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ 6–4 ರಲ್ಲಿ ರೈಲ್ವೆಯ ರೋಹಿತ್‌ ವಿರುದ್ಧ ಗೆದ್ದರೆ, ಫೈನಲ್‌ನಲ್ಲಿ 8–0 ರಲ್ಲಿ ಉತ್ತರ ಪ್ರದೇಶದ ಅನೂಪ್‌ ಅವರನ್ನು ಮಣಿಸಿದರು. ಕಳೆದ ಜುಲೈನಲ್ಲಿ ಉತ್ತರ ಆಫ್ರಿಕಾದ ಟ್ಯುನಿಷಿಯಾದಲ್ಲಿ ನಡೆದಿದ್ದ ಸೀನಿಯರ್ ವಿಶ್ವ ರ‍್ಯಾಂಕಿಂಗ್ ಸರಣಿಯ ಕುಸ್ತಿಯಲ್ಲಿ ಅರ್ಜುನ್‌ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಮಂಗೋಲಿಯಾದಲ್ಲಿ ಏಪ್ರಿಲ್‌ನಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದರು. ಭೋಪಾಲ್‌ನ 3ಇಎಂಇ ಸೆಂಟರ್‌ನಲ್ಲಿ ಹವಾಲ್ದಾರ್‌ ಆಗಿರುವ ಅರ್ಜುನ್‌, ಪುಣೆಯ ಸೇನಾ ಕ್ಯಾಂಪ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಅರ್ಜುನ್‌ ಹಲವು ವರ್ಷ ದಾವಣಗೆರೆಯ ಕ್ರೀಡಾ ವಸತಿನಿಲಯದಲ್ಲಿ ಆರ್‌. ಶಿವಾನಂದ ಅವರಿಂದ ತರಬೇತಿ ಪಡೆದುಕೊಂಡಿದ್ದರು. ರಜಾ ಅವಧಿಯಲ್ಲಿ ಇಲ್ಲಿಗೆ ಬಂದು ಅಭ್ಯಾಸ ನಡೆಸುತ್ತಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.