| ಲೇಡಿಸ್‌ ಯುರೋಪಿಯನ್‌ ಟೂರ್‌: ದೀಕ್ಷಾಗೆ ಕಿರೀಟ ಬೆರೌನ್‌, ಜೆಕ್‌ ರಿಪಬ್ಲಿಕ್‌: ಭಾರತದ ಪ್ರತಿಭಾನ್ವಿತ ಗಾಲ್ಫರ್‌ ದೀಕ್ಷಾ ಡಾಗರ್‌ ಅವರು ಲೇಡಿಸ್‌ ಯುರೋಪಿಯನ್‌ ಟೂರ್‌ನಲ್ಲಿ (ಎಲ್‌ಇಟಿ) ಎರಡನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. 22 ವರ್ಷದ ದೀಕ್ಷಾ ಭಾನುವಾರ ಕೊನಗೊಂಡ ಟಿಪ್‌ಸ್ಪೋರ್ಟ್ ಜೆಕ್‌ ಲೇಡಿಸ್‌ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಅವರು ತಮ್ಮ ಮೊದಲ ಎಲ್‌ಇಟಿ ಪ್ರಶಸ್ತಿಯನ್ನು 2019 ರಲ್ಲಿ ಗೆದ್ದಿದ್ದರು. ಆ ವರ್ಷ ದಕ್ಷಿಣ ಆಫ್ರಿಕಾ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು. ಇದೀಗ ನಾಲ್ಕು ವರ್ಷಗಳ ಬಿಡುವಿನ ಬಳಿಕ ಮತ್ತೊಂದು ಕಿರೀಟ ಮುಡಿಗೇರಿಸಿಕೊಂಡರು. ಎಲ್‌ಇಟಿ ಟೂರ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಭಾರತದ ಗಾಲ್ಫರ್‌ಗಳು ಇಬ್ಬರು ಮಾತ್ರ. ಅದಿತಿ ಅಶೋಕ್‌ ಅವರು 2016 ರಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದ್ದರು. ಹರಿಯಾಣದ ದೀಕ್ಷಾ, ಎಲ್‌ಇಟಿ ಟೂರ್‌ನಲ್ಲಿ ಒಂಬತ್ತು ಸಲ ‘ಟಾಪ್‌ 10’ ರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಋತುವಿನಲ್ಲಿ ನಾಲ್ಕು ಬಾರಿ ಅಂತಹ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯನ್ನು ದೀಕ್ಷಾ, 69 ಸ್ಟ್ರೋಕ್‌ಗಳೊಂದಿಗೆ ಕೊನೆಗೊಳಿಸಿದರು. ಮೂರು ಸುತ್ತುಗಳಲ್ಲಿ (69–65–69) ಒಟ್ಟು 203 ಸ್ಕೋರ್‌ (13 ಅಂಡರ್‌) ಮಾಡಿದರು. ಭಾರತದ ಆಟಗಾರ್ತಿಗೆ ತಕ್ಕ ಪೈಪೋಟಿ ನೀಡಿದ ಥಾಯ್ಲೆಂಡ್‌ನ ತ್ರಿಚಟ್ ಚೀನ್‌ಗ್ಲಾಬ್‌ (73–70–64) ಎರಡನೇ ಸ್ಥಾನ ಪಡೆದರೆ, ಫ್ರಾನ್ಸ್‌ನ ಸೆಲಿನ್ ಹೆರ್ಬಿನ್ (69–72–67) ಮೂರನೇ ಸ್ಥಾನ ಗಳಿಸಿದರು. ತ್ರಿಚಟ್‌ ಅವರು ಕೊನೆಯ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದರಾದರೂ, ಮೊದಲ ಎರಡು ಸುತ್ತುಗಳಲ್ಲಿ ಹೆಚ್ಚಿನ ಸ್ಟ್ರೋಕ್‌ಗಳನ್ನು ತೆಗೆದುಕೊಂಡದ್ದು ಮುಳುವಾಗಿ ಪರಿಣಮಿಸಿತು. ಐದು ಶಾಟ್‌ಗಳ ಮುನ್ನಡೆಯೊಂದಿಗೆ ಅಂತಿಮ ಸುತ್ತಿನಲ್ಲಿ ಕಣಕ್ಕಿಳಿದ ದೀಕ್ಷಾ, ಯಾವುದೇ ಒತ್ತಡಕ್ಕೆ ಒಳಗಾಗಲಿಲ್ಲ. ಪ್ರಣವಿಗೆ 17ನೇ ಸ್ಥಾನ: ಕಣದಲ್ಲಿದ್ದ ಭಾರತದ ಇನ್ನೊಬ್ಬಳು ಆಟಗಾರ್ತಿ, ಪ್ರಣವಿ ಅರಸ್‌ ಜಂಟಿ 17ನೇ ಸ್ಥಾನ ಪಡೆದರು. ಮೂರು ಸುತ್ತುಗಳನ್ನು (75-68-69) ಪೂರೈಸಲು ಅವರು ಒಟ್ಟು 212 ಸ್ಟ್ರೋಕ್‌ಗಳನ್ನು (4 ಅಂಡರ್‌) ತೆಗೆದುಕೊಂಡರು. ಮೈಸೂರಿನ ಪ್ರಣವಿ ಅವರು ಎಲ್‌ಇಟಿನಲ್ಲಿ ತೋರಿದ ಉತ್ತಮ ಪ್ರದರ್ಶನ ಇದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.