ಫುಟ್‌ಬಾಲ್‌ | ಸಂತೋಷ್‌ ಟ್ರೋಫಿ: ರೈಲ್ವೇಸ್‌ಗೆ ಮಣಿದ ಕರ್ನಾಟಕ ಯುಪಿಯ (ಅರುಣಾಚಲ ಪ್ರದೇಶ),: ರೈಲ್ವೇಸ್ ತಂಡವು ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 1–0 ಗೋಲಿನಿಂದ ಸೋಲಿಸಿತು. ಗುರುವಾರ ನಡೆದ ಪಂದ್ಯದ ಏಕೈಕ ಗೋಲನ್ನು ಸುಬ್ರತಾ ಮುರ್ಮು 53ನೇ ನಿಮಿಷ ಗಳಿಸಿದರು. ಈ ಸೋಲಿನಿಂದ ಕರ್ನಾಟಕದ ಕ್ವಾರ್ಟರ್‌ಫೈನಲ್ ಆಸೆ ಕ್ಷೀಣವಾಯಿತು. ತಂಡ ಆಡಿರುವ ನಾಲ್ಕು ಪಂದ್ಯಗಳಿಂದ ಎರಡು ಪಾಯಿಂಟ್‌ಗಳನ್ನು ಮಾತ್ರ ಗಳಿಸಿದೆ. ಇನ್ನೊಂದೆಡೆ ರೈಲ್ವೇಸ್ ತಂಡ ನಾಲ್ಕು ಪಂದ್ಯಗಳಿಂದ ಏಳು ಪಾಯಿಂಟ್ಸ್‌ ಕಲೆಹಾಕಿದ್ದು ಎಂಟರ ಘಟ್ಟಕ್ಕೇರುವ ಅವಕಾಶ ಉಜ್ವಲಗೊಳಿಸಿದೆ. ಮಿಜೋರಾಮ್ ಎದುರು ಕೊನೆಯ ಪಂದ್ಯ ‘ಡ್ರಾ’ ಆದರೂ ರೈಲ್ವೇಸ್‌ ದಾರಿ ಸುಗಮವಾಗಲಿದೆ. ಮಣಿಪುರ ತಂಡ ದಿನ ಎರಡನೇ ಪಂದ್ಯದಲ್ಲಿ 4–1 ಗೋಲುಗಳಿಂದ ಮಿಜೋರಾಮ್ ತಂಡವನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿತು. ಫಿಲಾಂ ಸನತೊಯಿ ಮೈಥೇಯಿ (35, 90ನೇ ನಿಮಿಷ), ಲೀಮಾಜಮ್ ಸಂಗಕರ್ ಸಿಂಗ್ (8ನೇ) ಮತ್ತು ಸಬ್‌ಸ್ಟಿಟ್ಯೂಟ್‌ ಪೆಬಾಮ್ ರೆನೆಡಿ ಸಿಂಗ್ (56ನೇ ನಿಮಿಷ) ಮಣಿಪುರ ಪರ ಗೋಲು ಗಳಿಸಿದರು. ಮಿಜೋರಾಮ್ ಪರ ಮಲ್ಸಾಮ್‌ಜುವಾಲಾ ತ್ಲಾಂಗ್ಟೆ (84ನೇ ನಿಮಿಷ) ಸೋಲಿನ ಅಂತರ ಕಡಿಮೆ ಮಾಡಿದರು. ಮಣಿಪುರ ಬಿ ಗುಂಪಿನಲ್ಲಿ 4 ಪಂದ್ಯಗಳಿಂದ 10 ಪಾಯಿಂಟ್ಸ್‌ ಸಂಗ್ರಹಿಸಿದ್ದು, ಅಗ್ರಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.