ದುಬೈ ಟೆನಿಸ್ | ಯೂಕಿ– ರಾಬಿನ್‌ ಜೋಡಿ ಸೆಮಿಗೆ ದುಬೈ: ಭಾರತದ ಯೂಕಿ ಭಾಂಬ್ರಿ ಮತ್ತು ಅವರ ಡಚ್‌ ಜತೆಗಾರ ರಾಬಿನ್ ಹಸ್ಸೆ ಅವರು ದುಬೈ ಟೆನಿಸ್ ಟೂರ್ನಿಯರ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು. ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಯೂಕಿ– ರಾಬಿನ್‌ ಜೋಡಿಯು 6-4, 7-6 (1)ರಿಂದ ಮೂರನೇ ಶ್ರೇಯಾಂಕದ ಜೇಮಿ ಮರ್ರೆ ಮತ್ತು ಮೈಕೆಲ್ ವೀನಸ್ ಅವರಿಗೆ ಆಘಾತ ನೀಡಿತು. ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ರೋಹನ್ ಬೋಪಣ್ಣ (ಭಾರತ) ಮತ್ತು ಮ್ಯಾಥ್ಯೂ ಎಬ್ಡೆನ್ (ಆಸ್ಟ್ರೇಲಿಯಾ) ಜೋಡಿಯು 6–3, 3–6, 8–10ರಿಂದ ಉರುಗ್ವೆಯ ಏರಿಯಲ್ ಬೆಹರ್ ಮತ್ತು ಜೆಕ್ ಗಣರಾಜ್ಯದ ಆ್ಯಡಂ ಪಾವ್ಲಾಸೆಕ್ ಅವರಿಗೆ ಮಣಿಯಿತು. ಟ್ರೀಸಾ– ಗಾಯತ್ರಿ ಜೋಡಿ ಮುನ್ನಡೆ: ಮುಲ್ಹೀಮ್ ಅನ್‌ ಡೆರ್‌ ರುರ್ (ಜರ್ಮನಿ): ಭಾರತದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಜರ್ಮನ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಭಾರತದ ಆಟಗಾರ್ತಿಯರು 21-10, 21-11 ನೇರ ಗೇಮ್‌ಗಳಿಂದ ಜೆಕ್ ಗಣರಾಜ್ಯದ ಸೋನಾ ಹೊರಿಂಕೋವಾ ಮತ್ತು ಕಟೆರಿನಾ ಜುಜಾಕೋವಾ ಅವರನ್ನು ಮಣಿಸಿದರು. ವಾರಿಯರ್ಸ್‌ಗೆ ಜಯ: ಬೆಂಗಳೂರು: ಕವಿಯರಸನ್ ಅವರ ಆಟದ ಬಲದಿಂದ ಬೆಂಗಳೂರು ವಾರಿಯರ್ಸ್‌ ಎಫ್‌ಸಿ ತಂಡವು ಬಿಡಿಎಫ್‌ಎ ‘ಬಿ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ 3–1ರಿಂದ ತಿಲಕ್‌ ಮೆಮೋರಿಯಲ್‌ ಎಫ್‌ಸಿ ತಂಡವನ್ನು ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಎಜಿಒಆರ್‌ಸಿ ಎಫ್‌ಸಿ ತಂಡವು ಆದಾಯ ತೆರಿಗೆ ತಂಡದೊಂದಿಗೆ ಗೋಲುರಹಿತವಾಗಿ ಡ್ರಾ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.