ಮಾರ್ಚ್‌ 30ರಿಂದ ಕುಂಡ್ಯೋಳಂಡ ಹಾಕಿ ಉತ್ಸವ ಬೆಂಗಳೂರು: ಕೊಡವ ಹಾಕಿ ಉತ್ಸವದ 24ನೇ ಆವೃತಿಯ ‘ಕುಂಡ್ಯೋಳಂಡ ಹಾಕಿ ಕಾರ್ನಿವಾಲ್ 2024 ’ ಮಾರ್ಚ್‌ 30ರಿಂದ ಆರಂಭವಾಗಲಿದೆ. ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಕುಂಡ್ಯೋಳಂಡ ಕುಟುಂಬವು ಆಯೋಜಿಸುತ್ತಿರುವ ಹಾಕಿ ಉತ್ಸವವು ‌ ಏಪ್ರಿಲ್ 28ರಂದು ಮುಕ್ತಾಯಗೊಳ್ಳಲಿದೆ. ಸುಮಾರು 400 ತಂಡಗಳು ಭಾವಹಿಸುವ ನಿರೀಕ್ಷೆ ಇದೆ. ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ₹ 4ಲಕ್ಷ ನಗದು, ಟ್ರೋಫಿ ಹಾಗೂ ರನ್ನರ್ ಅಪ್ ತಂಡಕ್ಕೆ ₹ 3 ಲಕ್ಷ ನಗದು ನೀಡಲಾಗುವುದು. ಕಳೆದ ವರ್ಷ ಅಪ್ಪಚೆಟ್ಟೋಳಂಡ ಕೌಟುಂಬಿಕ ಕಪ್‌ ಹಾಕಿ ಪಂದ್ಯಾವಳಿಯಲ್ಲಿ 336 ತಂಡಗಳು ಪಾಲ್ಗೊಂಡಿದ್ದವು ಎಂದು ಕುಂಡ್ಯೋಳಂಡ ಹಾಕಿ ಕಾರ್ನಿವಾಲ್ ಸಂಚಾಲಕ ದಿನೇಶ್ ಕಾರ್ಯಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಿತ್ಯ 24 ಪಂದ್ಯಗಳು ನಡೆಯಲಿವೆ. ಪ್ರಮಾಣಿತ ನಿಯಮಗಳನ್ನು ಪೂರೈಸಲು ಸಾಧ್ಯವಾಗದ ತಂಡಗಳಿಗೆ ಕನಿಷ್ಠ 9 ಆಟಗಾರರನ್ನೊಳಗೊಂಡ ತಂಡ ರಚನೆಗೂ ಅವಕಾಶ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ. ಇದರಿಂದ ಹಾಕಿ ಕ್ರೀಡೆಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಕಾರ್ನಿವಾಲ್ ಅಧ್ಯಕ್ಷ ರಮೇಶ್ ಮುದ್ದಯ್ಯ ಮಾತನಾಡಿ, ಪಂದ್ಯಗಳ ಜೊತೆಗೆ ನಿತ್ಯ ಸಂಜೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಹತ್ತು ಕಿ.ಮೀ. ಮ್ಯಾರಥಾನ್, ವಧು–ವರರ ಸಮಾವೇಶ, ಆಹಾರ ಉತ್ಸವ, ಆರೋಗ್ಯ ತಪಾಸಣೆ ಶಿಬಿರ, ಬಾಳೋಪಾಟ್ ತರಬೇತಿ ಸಹ ಇರುತ್ತದೆ ಎಂದ ಹೇಳಿದರು. ಕೊಡುವ ಹಾಕಿ ಅಕಾಡೆಮಿ ಅಧ್ಯಕ್ಷ ಬೋಪಣ್ಣ ಮಾತನಾಡಿ, ಹಾಕಿ ಕ್ರೀಡೆಗೆ ಪ್ರೋತ್ಸಾಹ ನೀಡಲು ಮತ್ತಷ್ಟು ಕ್ರೀಡಾಂಗಣಗಳ ಅವಶ್ಯಕತೆ ಇದೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.