ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌: ಭರವಸೆ ಮೂಡಿಸಿದ ಲಕ್ಷ್ಯ ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಟಿಕೆಟ್‌ ಪಡೆಯುವ ಭರವಸೆ ಮೂಡಿಸಿದ್ದಾರೆ. ಕಳೆದ ವಾರ ನಡೆದ ಫ್ರೆಂಚ್‌ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಅವರು, ಒಲಿಂಪಿಕ್ಸ್ ಕ್ರೀಡಾಕೂಟದ ಅರ್ಹತಾ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನ ಪಡೆದಿದ್ದಾರೆ. ಭಾರತದ 22 ವರ್ಷದ ಆಟಗಾರ 2022ರ ನವೆಂಬರ್‌ನಲ್ಲಿ ವಿಶ್ವದ ಆರನೇ ರ್‍ಯಾಂಕ್‌ ತಲುಪಿದ್ದರು. ಅದು ಸೇನ್‌ ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆ. 2023ರ ಏಪ್ರಿಲ್‌ನಲ್ಲಿ 25ನೇ ರ‍್ಯಾಂಕ್‌ಗೆ ಕುಸಿದ ಅವರು, ಆಗಸ್ಟ್ ವೇಳೆಗೆ ಸುಧಾರಿತ ಆಟ ಪ್ರದರ್ಶಿಸಿ 11ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಮತ್ತೆ ಲಯ ಕಂಡುಕೊಳ್ಳಲು ವಿಫಲವಾದ ಅವರು ಈ ವರ್ಷದ ಆರಂಭದಲ್ಲಿ 20ನೇ ಸ್ಥಾನಕ್ಕೆ ಜಾರಿದ್ದರು. ಈ ಋತುವಿನಲ್ಲಿ ಮಲೇಷ್ಯಾ ಸೂಪರ್‌ ಮತ್ತು ಇಂಡಿಯಾ ಸೂಪರ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ ಅವರು ಒಲಿಂಪಿಕ್‌ ಕೂಟದ ಅರ್ಹತಾ ರ್‍ಯಾಂಕಿಂಗ್‌ನಲ್ಲಿ 19ನೇ ಸ್ಥಾನ ಗಳಿಸಿದ್ದರು. ಫೆಂಚ್‌ ಓಪನ್‌ ಸೂಪರ್‌ 750 ಟೂರ್ನಿಯಲ್ಲಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ್ದ ಕಾರಣ ಮತ್ತೆ ರ‍್ಯಾಂಕಿಂಗ್‌ ಸುಧಾರಿಸಿದೆ. ಮಂಗಳವಾರ ಬಿಡುಗಡೆಯಾದ ಬಿಡಬ್ಲ್ಯೂಎಫ್‌ ರ್‍ಯಾಂಕಿಂಗ್‌ನಲ್ಲೂ ಅವರು ಒಂದು ಸ್ಥಾನ ಬಡ್ತಿ ಪಡೆದು 18ನೇ ಸ್ಥಾನಕ್ಕೆ ಏರಿದರು. ಎಚ್‌.ಎಸ್. ಪ್ರಣಯ್ ಅವರು ಫ್ರೆಂಚ್‌ ಓಪನ್‌ನಲ್ಲಿ ಆರಂಭಿಕ ಸುತ್ತಿನಲ್ಲಿ ನಿರ್ಗಮಿಸಿದ ಬಳಿಕ ವಿಶ್ವ ರ್‍ಯಾಂಕಿಂಗ್‌ ಮತ್ತು ಒಲಿಂಪಿಕ್ ಕ್ರೀಡಾಕೂಟದ ಅರ್ಹತೆಯಲ್ಲಿ ಏಳರಿಂದ ಎಂಟನೇ ಸ್ಥಾನಕ್ಕೆ ಜಾರಿದರು. ಏಪ್ರಿಲ್ ಅಂತ್ಯದ ವೇಳೆಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೊದಲ 16 ಸ್ಥಾನದಲ್ಲಿರುವ ಆಟಗಾರರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆಯಲ್ಲಿ 13ನೇ ರ‍್ಯಾಂಕ್‌ ಪಡೆದಿದ್ದಾರೆ. ಫ್ರೆಂಚ್ ಓಪನ್ ಪುರುಷರ ಡಬಲ್ಸ್‌ ಚಾಂಪಿಯನ್‌ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಬಿಡಬ್ಲ್ಯೂಎಫ್‌ ರ‍್ಯಾಂಕ್‌ನಲ್ಲಿ ಅಗ್ರಸ್ಥಾನ ಹಾಗೂ ಒಲಿಂಪಿಕ್ ಕ್ರೀಡಾಕೂಟದ ಅರ್ಹತೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.