400 ಮೀಟರ್ಸ್ ಕೂಟ: ಚಿನ್ನ ಗೆದ್ದ ಆಳ್ವಾಸ್‌ನ ಸಂಗೀತಾ ಮಂಗಳೂರು: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಸಾಯಿ ಸಂಗೀತ, ಭಾರತ ಅಥ್ಲೆಟಿಕ್ ಫೆಡರೇಷನ್ ಆಶ್ರಯದಲ್ಲಿ ತಿರುವನಂತಪುರದಲ್ಲಿ ಸೋಮವಾರ ಆರಂಭಗೊಂಡ ರಾಷ್ಟ್ರೀಯ ಮುಕ್ತ 400 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಎಲ್‌ಎನ್‌ಸಿಪಿ ಆವರಣದಲ್ಲಿ ನಡೆಯುತ್ತಿರುವ ಕೂಟದ 5ನೇ ಆವೃತ್ತಿಯ 20 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸಾಯಿ ಸಂಗೀತ 55.3 ಸೆಕೆಂಡುಗಳ ಸಾಧನೆ ಮಾಡಿದರು. ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸಿದ ಅವರು ಫೈನಲ್‌ನಲ್ಲಿ ರಾಜಸ್ತಾನದ ಮಿಶ್ತಿ ಕಾಜ್ಲಾ (55.70 ಸೆ) ಅವರನ್ನು ಹಿಂದಿಕ್ಕಿದರು. ಕೇರಳದ ಸಾಂಡ್ರಾ ಮೋಳ್ ಸಾಬು ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡರು. ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ಪೂವಮ್ಮ ರಾಜು ಬೆಳ್ಳಿ ಪದಕ ಗಳಿಸಿದರು. ಅವರ ಪೈಪೋಟಿಯನ್ನು ಮೀರಿದ ತಮಿಳುನಾಡಿನ ವಿದ್ಯಾ ರಾಮರಾಜ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ತೀವ್ರ ಕುತೂಹಲ ಕೆರಳಿಸಿದ್ದ ಪುರುಷರ ವಿಭಾಗದ ಮೂರೂ ಪದಕಗಳು ಕೇರಳದ ಪಾಲಾದವು. 2019ರಲ್ಲಿ 45.21 ಸೆಕೆಂಡುಗಳ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಮುಹಮ್ಮದ್ ಅನಾಸ್ ಯಾಹಿಯಾ ಇಲ್ಲಿ 46.48 ಸೆಕೆಂಡುಗಳೊಂದಿಗೆ ಬೆಳ್ಳಿ ಪದಕ ಗಳಿಸಿದರು. ನೋಹ್ ನಿರ್ಮಲ್ ಟೋಮ್ (46.40) ಚಿನ್ನ ಗೆದ್ದರೆ ಮುಹಮ್ಮದ್ ಅಜ್ಮಲ್‌ ವಿ ಕಂಚಿನ ಪದಕ ಗಳಿಸಿದರು. ಕರ್ನಾಟಕದ ಯಶಸ್‌ ಎಸ್‌.ಪಿ (47.52 ಸೆ) ಅವರಿಗೆ 6ನೇ ಸ್ಥಾನ ಲಭಿಸಿತು. ಫಲಿತಾಂಶಗಳು ಪುರುಷರು: ನೋಹ್‌ ನಿರ್ಮಲ್ ಟೋಮ್–1 ಕಾಲ: 46.40 ಸೆ, ಮುಮ್ಮದ್ ಅನಾಸ್ ಯಾಹಿಯಾ–2, ಮುಹಮ್ಮದ್ ಅಜ್ಮಲ್ ವಿ–3 (ಮೂವರೂ ಕೇರಳ); 20 ವರ್ಷದೊಳಗಿನವರು: ನವೀನ್‌ ಕುಮಾರ್ (ತಮಿಳುನಾಡು)–1 ಕಾಲ: 47.40 ಸೆ, ಹಸೈಫ ಖೈಸರ್ (ಬಿಹಾರ)–2, ಅಭಿರಾಮ್ ಪಿ (ಕೇರಳ)–3; 18 ವರ್ಷದೊಳಗಿನವರು: ಪೀಯೂಷ್‌ ರಾಜ್‌ (ಬಿಹಾರ)–1 ಕಾಲ: 49.39 ಸೆ, ಯುಗಾಂಕ್ ಚೌಧರಿ–2, ಉಮೇಶ್ ಸಾಹನಿ–3 (ಇಬ್ಬರೂ ಉತ್ತರ ಪ್ರದೇಶ). ಮಹಿಳೆಯರು: ವಿದ್ಯಾ ರಾಮರಾಜ್‌ (ತಮಿಳುನಾಡು)–1 ಕಾಲ: 52.25 ಸೆ, ಪೂವಮ್ಮ ರಾಜು (ಕರ್ನಾಟಕ)–2, ದಂಡಿ ಜ್ಯೋತಿಕಾ (ಆಂಧ್ರಪ್ರದೇಶ)–3; 20 ವರ್ಷದೊಳಗಿನವರು: ಸಾಯಿ ಸಂಗೀತಾ (ತೆಲಂಗಾಣ, ಆಳ್ವಾಸ್ ವಿದ್ಯಾರ್ಥಿನಿ)–1 ಕಾಲ: 55.30ಸೆ, ಮಿಶ್ತಿ ಕಾಜ್ಲಾ–2, ಸಾಂಡ್ರಾ ಮೋಳ್ ಸಾಬು (ಕೇರಳ)–3; 18 ವರ್ಷದೊಳಗಿನವರು: ಮಯೂಖ ವಿನೋದ್ (ಕೇರಳ)–1 ಕಾಲ: 58.83 ಸೆ, ಲತಿಕಾ ಧರನ್ (ತಮಿಳುನಾಡು)–2, ಈಕಿಶಾ ಕಿರಣ್ (ಮಹಾರಾಷ್ಟ್ರ)–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.