ಒಲಿಂಪಿಕ್ಸ್‌ಗೆ ಮುನ್ನ ಭಾರತಕ್ಕೆ ಸತ್ವಪರೀಕ್ಷೆ ಪರ್ತ್‌ (ಆಸ್ಟ್ರೇಲಿಯಾ): ಉತ್ತಮ ಲಯದಲ್ಲಿರುವ ಭಾರತ ಪುರುಷರ ಹಾಕಿ ತಂಡ, ಆಸ್ಟ್ರೇಲಿಯಾ ಪ್ರವಾಸದ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಶನಿವಾರ ಆಡಲಿದೆ. ಪ್ರಬಲ ಆಸ್ಟ್ರೇಲಿಯಾ ವಿರುದ್ಧದ ಸರಣಿ ಭಾರತಕ್ಕೆ ಸತ್ವಪರೀಕ್ಷೆಯಾಗಲಿದೆ. ಪ್ರವಾಸದಲ್ಲಿ ಭಾರತ ಐದು ಪಂದ್ಯಗಳನ್ನು ಆಡಲಿದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮುನ್ನ ತಂಡದಲ್ಲಿ ಸುಧಾರಿಸಿಕೊಳ್ಳಬಹುದಾದ ಕ್ಷೇತ್ರ ತಿಳಿದುಕೊಳ್ಳಲು ಐದು ಪಂದ್ಯಗಳ ಸರಣಿ ನೆರವಾಗಲಿದೆ. ‘ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನಮ್ಮ ತಂಡದ ಸಿದ್ಧತೆಯ ಪ್ರಮಾಣ ತಿಳಿದುಕೊಳ್ಳಲು ಈ ಸರಣಿಯು ‘ಲಿಟ್ಮಸ್‌’ ಪರೀಕ್ಷೆ ಆಗಲಿದೆ. ನಮ್ಮ ತಂತ್ರಗಳಿಗೆ ಅಂತಿಮ ರೂಪು ನೀಡಲು ಮತ್ತು ಸುಧಾರಿಸಿಕೊಳ್ಳಬಹುದಾದ ಜಾಗ ತಿಳಿದುಕೊಳ್ಳಲು ಮತ್ತು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಒಳ್ಳೆಯ ಲಯದಲ್ಲಿರುವುದನ್ನು ಮನವರಿಕೆ ಮಾಡಿಕೊಳ್ಳಲು ಈ ಸರಣಿ ನೆರವಾಗಲಿದೆ’ ಎಂದು ಕೋಚ್ ಕ್ರೇಗ್ ಫುಲ್ಟನ್ ಹೇಳಿದರು. ಭಾರತಕ್ಕೆ ಒಂದು ದಶಕದ ನಂತರ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯೊಂದನ್ನು ಗೆಲ್ಲಲೂ ಅವಕಾಶ ಇದಾಗಿದೆ. 2014ರಲ್ಲಿ ಭಾರತ ಕೊನೆಯ ಬಾರಿ ಆಸ್ಟ್ರೇಲಿಯಾ ವಿರುದ್ಧ ಆ ತಂಡದ ತವರಿನಲ್ಲಿ ಟೆಸ್ಟ್ ಗೆದ್ದಿತ್ತು. ಹರ್ಮನ್‌ಪ್ರೀತ್ ಬಳಗ ಫೆಬ್ರುವರಿಯಲ್ಲಿ ನಡೆದ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಈ ಸರಣಿಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜಾಗಿದೆ. ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ ಭಾರತ ನಾಲ್ಕನೇ ಹಾಗೂ ಆಸ್ಟ್ರೇಲಿಯಾ ಐದನೇ ಸ್ಥಾನದಲ್ಲಿದೆ. ಒಲಿಂಪಿಕ್ಸ್‌ನಲ್ಲೂ ಎರಡೂ ತಂಡಗಳು ಒಂದೇ ಗುಂಪಿನಲ್ಲಿ ಆಡಬೇಕಿದೆ. ಹೀಗಾಗಿ ಎರಡೂ ತಂಡಗಳ ನಡುವೆ ಉತ್ತಮ ಹೋರಾಟ ನಿರೀಕ್ಷಿಸಲಾಗಿದೆ. ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ (ಭಾರತೀಯ ಕಾಲಮಾನ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.