ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ: ಮೊದಲ ದಿನ ಏಳು ‘ಡ್ರಾ’ ಟೊರಾಂಟೊ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ, ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಗುರುವಾರ ಫ್ರಾನ್ಸ್‌ನ ಅಲಿರೇಝಾ ಫಿರೋಜ ಎದುರು ‘ಡ್ರಾ’ ಮಾಡಿಕೊಳ್ಳುವ ಮೊದಲು ಕೊಂಚ ಆತಂಕದ ಕ್ಷಣಗಳನ್ನು ಎದುರಿಸಿದರು. ಡಿ.ಗುಕೇಶ್ ಇನ್ನೊಂದು ಪಂದ್ಯದಲ್ಲಿ ಸ್ವದೇಶದ ವಿದಿತ್‌ ಎಸ್‌.ಗುಜರಾತಿ ಜೊತೆ ಪಾಯಿಂಟ್‌ ಹಂಚಿಕೊಂಡರು. ಓಪನ್ ವಿಭಾಗದ ನಾಲ್ಕೂ ಪಂದ್ಯಗಳು ‘ಡ್ರಾ’ ಆದರೆ, ಮಹಿಳೆಯರ ವಿಭಾಗದಲ್ಲೂ ಮೂರು ಪಂದ್ಯಗಳು ಅದೇ ಹಾದಿ ಹಿಡಿದವು. ಚೀನಾ ಆಟಗಾರ್ತಿಯರ ವ್ಯವಹಾರವಾಗಿದ್ದ ಒಂದು ಪಂದ್ಯದಲ್ಲಿ ಝೊಂಗ್‌ವಿ, ಟಿಂಗ್‌ಜಿ ಲೀ ಅವರನ್ನು ಸೋಲಿಸಿ ಮುನ್ನಡೆ ಪಡೆದರು. ಭಾರತದ ಆರ್‌.ವೈಶಾಲಿ ಮತ್ತು ಕೋನೇರು ಹಂಪಿ ತಮ್ಮ ನಡುವಣ ಮೊದಲ ಪಂದ್ಯವನ್ನು 41 ನಡೆಗಳ ನಂತರ ಡ್ರಾ ಮಾಡಿಕೊಂಡರು ಅರ್ಧರ್ಧ ಪಾಯಿಂಟ್‌ ಪಡೆದರು. ಹೆಚ್ಚಿನ ಬೋರ್ಡ್‌ಗಳಲ್ಲಿ ಒಂದೇ ದೇಶದ ಆಟಗಾರರು ಎದುರಾದರು. ಯುವ ಆಟಗಾರರಾದ ಪ್ರಜ್ಞಾನಂದ ಮತ್ತು ಅಲಿರೇಝಾ ಎದುರಾಳಿ ರಾಜನತ್ತ ದಾಳಿಗೆ ಪೈಪೋಟಿಯಲ್ಲಿ ನಿರತಾದರು. ಆದರೆ ಕೊನೆಗೆ ನಡೆಗಳ ಪುನರಾವರ್ತನೆಯಿಂದ 39 ನಡೆಗಳ ನಂತರ ಪಂದ್ಯ ಡ್ರಾ ಆಯಿತು. ಪ್ರಜ್ಞಾನಂದ ಕಪ್ಪು ಕಾಯಿಗಳಲ್ಲಿ ಆಡಿದ್ದರು. ಇವರಿಬ್ಬರ ಆಟದ ‌ಕಂಪ್ಯೂಟರ್‌ ವಿಶ್ಲೇಷಣೆಯೂ ಸಮಬಲ ತೋರಿಸಿತು. ಎರಡನೇ ಸುತ್ತಿನಲ್ಲಿ ಪ್ರಜ್ಞಾನಂದ, ಸ್ವದೇಶದ ಗುಕೇಶ್ ಡಿ. ಎದುರು ಆಡಲಿದ್ದಾರೆ. ಅಲಿರೇಝಾ ಅವರಿಗೆ ನೆಪೊಮ್‌ನಿಯಾಚಿ ಎದುರಾಳಿಯಾಗಿದ್ದಾರೆ. ಟೂರ್ನಿಯಲ್ಲಿ ಭಾಗವಹಿಸುವವರಲ್ಲಿ ಕಡಿಮೆ ರ್‍ಯಾಂಕಿಂಗ್ ಹೊಂದಿರುವ ನಿಜತ್‌ ಅಬಸೋವ್ (ಫಿಡೆ), ಪ್ರಬಲ ಎದುರಾಳಿ ನೆಪೊಮ್‌ನಿಯಾಚಿ ಎದುರು ಸುಲಭವಾಗಿ ಡ್ರಾ ಮಾಡಿಕೊಂಡು ‘ಗ್ರೇಟ್‌ ಹಾಲ್‌’ ನಿಂದ ನಿರ್ಗಮಿಸಿದ ಮೊದಲ ಆಟಗಾರ ಎನಿಸಿದರು. ‘ಇಂಡಿಯನ್ ಡರ್ಬಿ’ ಪಂದ್ಯದಲ್ಲಿ ವಿದಿತ್‌, ಸಮತೋಲನದ ಪಂದ್ಯದಲ್ಲಿ ಅವಕಾಶಗಳಿಗೆ ಹೊಂಚುಹಾಕಿದರು. 17ನೇ ನಡೆಯಲ್ಲಿ ಬಿಷಪ್‌ ಸ್ಯಾಕ್ರಿಫೈಸ್‌ಗೆ (ಬಿಟ್ಟುಕೊಡಲು) ಮುಂದಾದರು. ಆದರೆ ಅದನ್ನು ಪಡೆದರೆ ಆಗುವ ಅಪಾಯಗಳನ್ನು ಗ್ರಹಿಸಿದ ಗುಕೇಶ್ ನಡೆಗಳ ಪುನರಾವರ್ತನೆ ಅನಿವಾಯಗೊಳಿಸಿ ‘ಡ್ರಾ’ ಮಾಡಿಕೊಂಡರು. ಗುಜರಾತಿ ಅವರ ಸಿದ್ಧತಾ ತಂಡದಲ್ಲಿ ಭಾರತದ ಹಲವು ಬಾರಿಯ ರಾಷ್ಟ್ರೀಯ ಚಾಂಪಿಯನ್ ಸೂರ್ಯಶೇಖರ ಗಂಗೂಲಿ ಮತ್ತು ಡೇನಿಯಲ್ ವೊಕಾಟುರೊ (ಇಟಲಿ) ಇದ್ದು ಟೊರಾಂಟೊದಲ್ಲೇ ವಾಸ್ತವ್ಯ ಹೂಡಿದ್ದಾರೆ. ಗುಕೇಶ್ ಅವರ ‘ಸೆಕೆಂಡ್‌’ (ಸಿದ್ಧತೆಯಲ್ಲಿ ನೆರವುಗಾರ) ಆಗಿ ಗ್ರೆಗೊರ್ಝ್ ಗಜೆವ್‌ಸ್ಕಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅವರ ಜೊತೆ ಇನ್ನೂ ಕೆಲವರು ತಂಡದಲ್ಲಿದ್ದಾರೆ. ಅವರ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ’ ಎಂದು ಗುಕೇಶ್ ಹೇಳಿದರು. ಫಲಿತಾಂಶಗಳು: ಮೊದಲ ಸುತ್ತು: ಅಲಿರೇಜಾ ಫಿರೋಜ್ (ಫ್ರಾನ್ಸ್‌) ಮತ್ತು ಪ್ರಜ್ಞಾನಂದ ಆರ್. ನಡುವಣ ಪಂದ್ಯ ಡ್ರಾ; ಡಿ.ಗುಕೇಶ್ ಮತ್ತು ವಿದಿತ್‌ ಗುಜರಾತಿ ನಡುವಣ ಪಂದ್ಯ ಡ್ರಾ; ಫ್ಯಾಬಿಯಾನೊ ಕರುವಾನಾ (ಅಮೆರಿಕ) ಮತ್ತು ಹಿಕಾರು ನಕಾಮುರಾ (ಅಮೆರಿಕ) ನಡುವಣ ಪಂದ್ಯ ಡ್ರಾ; ನಿಜತ್ ಅಬಸೋವ್ (ಅಜರ್‌ಬೈಜಾನ್‌) ಮತ್ತು ಇಯಾನ್ ನೆಪೊಮ್‌ನಿಯಾಚಿ (ಫಿಡೆ). ಮಹಿಳಾ ವಿಭಾಗ: ಆರ್‌.ವೈಶಾಲಿ ಮತ್ತು ಕೆ.ಹಂಪಿ ನಡುವಣ ಪಂದ್ಯ ‘ಡ್ರಾ’; ಟಿಂಗ್ಜಿ ಲೀ (ಚೀನಾ) ಅವರಿಗೆ ಝೊಂಗ್‌ಯಿ ತಾನ್‌ (ಚೀನಾ) ಎದುರು ಸೋಲು; ಅನ್ನಾ ಮುಝಿಚುಕ್ (ಉಕ್ರೇನ್‌) ಮತ್ತು ನುರ್ಗ್ಯುಲ್ ಸಲಿಮೋವ (ಬಲ್ಗೇರಿಯಾ) ನಡುವಣ ಪಂದ್ಯ ಡ್ರಾ; ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಮತ್ತು ಕ್ಯಾತರಿನಾ ಲಾಗ್ನೊ (ಫಿಡೆ) ನಡುವಣ ಪಂದ್ಯ ಡ್ರಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.