ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ: ವಿದಿತ್ ವಿರುದ್ಧ ಗೆದ್ದ ಪ್ರಜ್ಞಾನಂದ ಟೊರಾಂಟೊ: ಕೌಶಲದ ಆಟವಾಡಿದ ಆರ್‌.ಪ್ರಜ್ಞಾನಂದ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಸ್ವದೇಶದ ವಿದಿತ್‌ ಗುಜರಾತಿ ಅವರ ಯಶಸ್ಸಿನ ಓಟಕ್ಕೆ ಶನಿವಾರ ತಡೆಯೊಡ್ಡಿದರು. ಅವರಂತೆಯೇ ಅವರ ಅಕ್ಕ ವೈಶಾಲಿ ಮಹಿಳೆಯರ ವಿಭಾಗದಲ್ಲಿ ಮೊದಲ ಗೆಲುವು ಸಾಧಿಸಿದರು. ಮಹಿಳೆಯರ ವಿಭಾಗದಲ್ಲಿ ನಿರ್ಣಾಯಕವಾದ ಏಕೈಕ ಪಂದ್ಯದಲ್ಲಿ ವೈಶಾಲಿ, ಬಲ್ಗೇರಿಯಾದ ನುರ್ಗ್ಯಾಲ್ ಸಲಿಮೋವಾ ಅವರನ್ನು 33 ನಡೆಗಳಲ್ಲಿ ಸೋಲಿಸಿದರು. ಈ ವಿಭಾಗದ ಉಳಿದ ಮೂರು ಪಂದ್ಯಗಳು ‘ಡ್ರಾ’ದಲ್ಲಿ ಕೊನೆಗೊಂಡವು. ಓಪನ್ ವಿಭಾಗದಲ್ಲಿ ಭಾರತದ ಇನ್ನೊಬ್ಬ ಆಟಗಾರ ಡಿ.ಗುಕೇಶ್‌, ಎದುರಾಳಿ ಇಯಾನ್‌ ನೆಪೊಮ್‌ನಿಯಾಚಿ (2 ಪಾಯಿಂಟ್‌) ಅವರ ರಕ್ಷಣೆಯನ್ನು ಭೇದಿಸಲು ನಾನಾ ಪ್ರಯತ್ನ ಮಾಡಿದರೂ ಯಶಸ್ಸು ಸಾಧಿಸಲಿಲ್ಲ. ರಷ್ಯಾ ಮೇಲೆ ನಿರ್ಬಂಧ ಹೇರಿರುವ ಕಾರಣ ಫಿಡೆ ಧ್ವಜದಡಿ ಆಡುತ್ತಿರುವ ನೆಪೊಮ್‌ನಿಯಾಚಿ, ‘ಡ್ರಾ’ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಪ್ರಜ್ಞಾನಂದ ಅವರ ಓಪನಿಂಗ್ ಶೈಲಿ, ವಿದಿತ್ ಅವರನ್ನು ಅಚ್ಚರಿಯಲ್ಲಿ ಕೆಡವಿತು. ಪಂದ್ಯ ಮಧ್ಯಮ ಹಂತ ತಲುಪುತ್ತಿದ್ದಂತೆ ಪ್ರಗ್ಗು ಕೈಮೇಲಾಯಿತು. ರೂಕ್‌ ನೆರವಿನಿಂದ ಎದುರಾಳಿ ಮೇಲೆ ಒತ್ತಡ ಹೇರಿದ ತಮಿಳುನಾಡು ಆಟಗಾರ 45 ನಡೆಗಳಲ್ಲಿ ಗೆಲುವನ್ನು ಪೂರೈಸಿದರು. ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಬಳಿ ಒಂದು ಕಾಲಾಳು ಹೆಚ್ಚು ಇದ್ದರೂ ಪ್ರಯೋಜನಕ್ಕೆ ಬರದೇ ಅಗ್ರ ಶ್ರೇಯಾಂಕದ ಆಟಗಾರ ಫ್ಯಾಬಿಯಾನೊ ಕರುವಾನಾ (ಅಮೆರಿಕ, 2 ಪಾಯಿಂಟ್‌) ಜತೆಗೆ ‘ಡ್ರಾ’ಕ್ಕೆ ತೃಪ್ತಿಪಡಬೇಕಾಯಿತು. ಹಿಕಾರು ನಕಾಮುರಾ (ಅಮೆರಿಕ, 1) ಅವರಿಗೆ ಅಜರ್‌ಬೈಜಾನ್‌ನ ನಿಜತ್ ಅಬಸೋವ್ (1) ಜೊತೆ ಡ್ರಾ ಮಾಡಿಕೊಳ್ಳಲು ಕಷ್ಟವಾಗಲಿಲ್ಲ. ಪಂದ್ಯ 29 ನಡೆಗಳನ್ನು ಕಂಡಿತು. ಈ ಟೂರ್ನಿಗೆ ಕೆಲದಿನ ಮೊದಲು ರಿಲ್ಯಾಕ್ಸ್‌ ಆಗಲು ಫುಟ್‌ಬಾಲ್‌ ಆಡುತ್ತಿದ್ದಾಗ ಕಾಲಿಗೆ ಪೆಟ್ಟುಮಾಡಿಕೊಂಡಿದ್ದ ಅಬಸೋವ್‌, ಆ ನೋವಿನ ನಡುವೆ ಅಬಸೋವ್ ಇಲ್ಲಿ ಆಡುತ್ತಿದ್ದಾರೆ. ಡಬಲ್‌ ರೌಂಡ್‌ರಾಬಿನ್ ಮಾದರಿಯ ಈ ಟೂರ್ನಿಯಲ್ಲಿ ಇನ್ನೂ 11 ಸುತ್ತುಗಳು ಆಡಲು ಇದ್ದು, ಕರುವಾನಾ, ಗುಕೇಶ್‌ ಮತ್ತು ನೆಪೊಮ್‌ನಿಯಾಚಿ ಅವರು ತಲಾ ಎರಡು ಪಾಯಿಂಟ್‌ಗಳೊಂದಿಗೆ ಲೀಡ್‌ ಹಂಚಿಕೊಂಡಿದ್ದಾರೆ. ಪ್ರಜ್ಞಾನಂದ ಮತ್ತು ವಿದಿತ್‌ ಸಂತೋಷ್ ಗುಜರಾತಿ ತಲಾ 1.5 ಪಾಯಿಂಟ್ಸ್‌ ಸಂಗ್ರಹಿಸಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ನಕಾಮುರಾ, ಅಲಿರೇಝಾ ಮತ್ತು ಅಬಸೋವ್ ತಲಾ ಒಂದು ಪಾಯಿಂಟ್ಸ್ ಹೊಂದಿದ್ದಾರೆ. ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೋನೇರು ಹಂಪಿ ಮಹಿಳಾ ವಿಭಾಗದ ಇನ್ನೊಂದು ಪಂದ್ಯದಲ್ಲಿ ಚೀನಾದ ಝೊಂಗ್‌ಯಿ ತಾನ್‌ ಅವರ ಜೊತೆ ‘ಕದನ ವಿರಾಮ’ಕ್ಕೆ ಸಹಿ ಹಾಕಿದರು. ಮಹಿಳಾ ವಿಭಾಗದಲ್ಲಿ ಝೊಂಗ್‌ಯಿ ಅವರು ಮೂರು ಸುತ್ತುಗಳಿಂದ ಎರಡೂವರೆ ಪಾಯಿಂಟ್ಸ್ ಪಡೆದು ಉಳಿದವರಿಗಿಂತ ಅರ್ಧ ಪಾಯಿಂಟ್‌ಗಳ ಸ್ಪಷ್ಟ ಮುನ್ನಡೆ ಪಡೆದಿದ್ದಾರೆ. ಮಹಿಳೆಯರ ವಿಭಾಗದ ಫಲಿತಾಂಶಗಳು: ಆರ್‌.ವೈಶಾಲಿಗೆ (1.5), ಬಲ್ಗೇರಿಯಾದ ನುರ್ಗ್ಯುಲ್ ಸಲಿಮೋವಾ (1) ವಿರುದ್ಧ ಜಯ; ಕೋನೇರು ಹಂಪಿ (1.5) ಮತ್ತು ಚೀನಾದ ಜೊಂಗ್‌ಯಿ ತಾನ್ (2.5) ನಡುವಣ ಪಂದ್ಯ ‘ಡ್ರಾ’; ಟಿಂಗ್ಜಿ ಲೀ (ಚೀನಾ, 1) ಮತ್ತು ಫಿಡೆಯ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (2) ನಡುವಣ ಪಂದ್ಯ ‘ಡ್ರಾ’; ಅನ್ನಾ ಮುಝಿಚುಕ್ (ಉಕ್ರೇನ್‌, 1) ಮತ್ತು ಕ್ಯಾತರಿನಾ ಲಾಗ್ನೊ (ಫಿಡೆ, 1) ನಡುವಣ ಪಂದ್ಯ ‘ಡ್ರಾ’. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.