ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ: ನೆಪೊಮ್‌ಗೆ ಮಣಿದ ವಿದಿತ್‌ ಗುಜರಾತಿ ಟೊರಾಂಟೊ: ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌, ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿ ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ (ಅಮೆರಿಕ) ಅವರ ಜೊತೆ ಭಾನುವಾರ ‘ಡ್ರಾ’ ಮಾಡಿಕೊಂಡರು. ಆದರೆ ಭಾರತದ ಇನ್ನೊಬ್ಬ ಆಟಗಾರ ವಿದಿತ್ ಸಂತೋಷ್ ಗುಜರಾತಿ ಸತತ ಎರಡನೇ ಸೋಲನುಭವಿಸಿದರು.‌ ಹೋದ ವರ್ಷ ಡಿಂಗ್‌ ಲಿರೆನ್‌ ಜೊತೆ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ಆಡಿದ್ದ ಇಯಾನ್ ನೆಪೊಮ್‌ನಿಯಾಚಿ ಅವರು ವಿದಿತ್ ಅವರನ್ನು ಸೋಲಿಸಿದರು. ಭಾರತದ ಇನ್ನೊಬ್ಬ ಪ್ರತಿಭಾನ್ವಿತ ಆರ್‌.ಪ್ರಜ್ಞಾನಂದ ಮತ್ತು ಅಮೆರಿಕದ ಹಿಕಾರು ನಕಾಮುರಾ ನಡುವಣ ಪಂದ್ಯ 24 ನಡೆಗಳ ನಂತರ ‘ಡ್ರಾ’ ಆಯಿತು. ಎಂಟು ಆಟಗಾರರ ಈ ಟೂರ್ನಿಯಲ್ಲಿ ಕಡಿಮೆ ರ್‍ಯಾಂಕಿಂಗ್ ಹೊಂದಿರುವ ನಿಜತ್ ಅಬಸೊವ್, ಹೋರಾಟದ ಆಟವಾಡಿ ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಜೊತೆ ‘ಡ್ರಾ’ಕ್ಕೆ ಸಹಿ ಮಾಡಿದರು. ಹಾಲಿ ವಿಶ್ವ ಚಾಂಪಿಯನ್‌ಗೆ ಸವಾಲಿಗ (ಚಾಲೆಂಜರ್‌)ನನ್ನು ನಿರ್ಧರಿಸಲು ನಡೆಯುತ್ತಿರುವ ಈ ಟೂರ್ನಿ ‘ಡಬಲ್‌ ರೌಂಡ್‌ ರಾಬಿನ್’ ಮಾದರಿಯಲ್ಲಿ ನಡೆಯುತ್ತಿದೆ. ಎರಡನೇ ಜಯದ ಮೂಲಕ ನೆಪೊಮ್‌ನಿಯಾಚಿ ಅವರು ನಾಲ್ಕು ಸುತ್ತುಗಳ ನಂತರ ಮೂರು ಪಾಯಿಂಟ್ಸ್ ಸಂಗ್ರಹಿಸಿ ಒಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ. ಕರುವಾನಾ ಮತ್ತು ಗುಕೇಶ್‌ (ತಲಾ 2.5) ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಪ್ರಜ್ಞಾನಂದ (2) ಮೂರನೇ ಸ್ಥಾನದಲ್ಲಿದ್ದಾರೆ. ವಿದಿತ್‌, ಅಬಸೋವ್‌, ಅಲಿರೇಝಾ ಮತ್ತು ನಕಾಮುರಾ (ತಲಾ 1.5) ನಂತರದ ಸ್ಥಾನದಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಆರ್‌.ವೈಶಾಲಿ, ರೇಟಿಂಗ್ ಪ್ರಕಾರ ಅಗ್ರಸ್ಥಾನದಲ್ಲಿರುವ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಎದುರು ‘ಡ್ರಾ’ ಮಾಡಿಕೊಂಡಿದ್ದು ಕಡಿಮೆ ಸಾಧನೆಯೇನೂ ಆಗಿರಲಿಲ್ಲ. ಆದರೆ ಮಾಜಿ ವಿಶ್ವ ರ‍್ಯಾಪಿಡ್ ಚಾಂಪಿಯನ್ ಕೋನೇರು ಹಂಪಿ, ತಮಗಿಂತ ಕಡಿಮೆ ಶ್ರೇಯಾಂಕದ ನುರ್ಗ್ಯುಲ್ ಸಲಿಮೋವಾ (ಬಲ್ಗೇರಿಯಾ) ಎದುರು ಪರಾಭವ ಅನುಭವಿಸಿದರು. ಇದು ಹಂಪಿಗೆ ನಾಲ್ಕು ಸುತ್ತುಗಳಲ್ಲಿ ಮೊದಲ ಸೋಲು. ಚೀನಾದ ಝೊಂಗ್ವಿ ತಾನ್ ಮೂರು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಅವರು ಕ್ಯಾತರಿನಾ ಲಾಗ್ನೊ (ರಷ್ಯಾ) ಜೊತೆ ‘ಡ್ರಾ’ ಮಾಡಿಕೊಂಡರು. ತಾನ್‌ ಅವರನ್ನು ಬೆನ್ನತ್ತಿರುವ ರಷ್ಯಾದ ಗೊರ್ಯಾಚ್ಕಿನಾ (2.5) ಅರ್ಧ ಪಾಯಿಂಟ್ ಅಂತರದಿಂದ ಎರಡನೇ ಸ್ಥಾನದದಲ್ಲಿದ್ದಾರೆ. ‌ವೈಶಾಲಿ, ಸಲಿಮೋವಾ ಮತ್ತು ಲಾಗ್ನೊ (ತಲಾ 2 ಪಾಯಿಂಟ್‌) ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಹಂಪಿ, ಮುಝಿಚುಕ್‌, ಟಿಂಗ್ಜಿ ಲೀ ಜೊತೆ ನಾಲ್ಕನೇ ಸ್ಥಾನ (ತಲಾ 1.5) ಹಂಚಿಕೊಂಡಿದ್ದಾರೆ. ಚೀನಾದ ಟಿಂಗ್ಜಿ ಲೀ ಅವರು ಉಕ್ರೇನ್‌ನ ಅನ್ನಾ ಮುಝಿಚುಕ್ ಎದುರು ‘ಡ್ರಾ’ ಮಾಡಿಕೊಂಡರು. ಕರುವಾನಾ ವಿರುದ್ಧ ಕಪ್ಪು ಕಾಯಿಗಳಲ್ಲಿ ಆಡಿದ ಗುಕೇಶ್‌, 72 ನಡೆಗಳನ್ನು ಕಂಡ ಪಂದ್ಯದ ಮಧ್ಯದ ಹಂತದಲ್ಲಿ ಸ್ವಲ್ಪ ಒತ್ತಡಕ್ಕೆ ಒಳಗಾದರು. ಆದರೆ ಪಾನ್‌ ಬಿಟ್ಟುಕೊಟ್ಟು ಡ್ರಾ ಮಾಡಲು ಸುಗಮ ಹಾದಿ ಕಂಡುಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.