2024 | ಡಚ್ ಸೈಕ್ಲಿಸ್ಟ್‌ ಹ್ಯಾರಿಗೆ ಹ್ಯಾಟ್ರಿಕ್‌ ಚಿನ್ನ ಪ್ಯಾರಿಸ್‌: ನೆದರ್ಲೆಂಡ್ಸ್‌ನ ಸೈಕ್ಲಿಸ್ಟ್‌ ಹ್ಯಾರಿ ಲಾವ್ರೆಸೆನ್ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್‌ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಅವರು ಎರಡು ಚಿನ್ನ ಸೇರಿದಂತೆ ಮೂರು ಪದಕಗಳನ್ನು ಜಯಿಸಿದ್ದರು. ಭಾನುವಾರ ನಡೆದ ಪುರುಷರ ಕೀರಿನ್‌ ವಿಭಾಗದ ಸ್ಪರ್ಧೆಯಲ್ಲಿ 27 ವರ್ಷ ವಯಸ್ಸಿನ ಹ್ಯಾರಿ ಚಾಂಪಿಯನ್‌ ಆದರು. ಹಿಂದಿನ ಒಲಿಂಪಿಕ್ಸ್‌ನಲ್ಲಿ ಅವರು ಇದೇ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದರು. ಈ ಮೊದಲು ಸ್ಪ್ರಿಂಟ್‌ ಮತ್ತು ತಂಡ ವಿಭಾಗದ ಸ್ಪ್ರಿಂಟ್‌ ಸ್ಪರ್ಧೆಯಲ್ಲಿ ಚಿನ್ನ ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದರು. ಸ್ಪ್ರಿಂಟ್‌ನಲ್ಲಿ ಸತತ ಐದು ಬಾರಿ ವಿಶ್ವಚಾಂಪಿಯನ್‌ ಆಗಿರುವ ಹ್ಯಾರಿ, ಒಲಿಂಪಿಕ್ಸ್‌ನಲ್ಲಿ ಐದು ಚಿನ್ನ ಗೆದ್ದ ನೆದರ್ಲೆಂಡ್ಸ್‌ನ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಮಾಜಿ ಈಜುಪಟು ಇಂಗೆ ಡಿ ಬ್ರೂಯಿನ್ ಸೇರಿದಂತೆ ಇತರ ಮೂವರು ನಾಲ್ಕು ಚಿನ್ನದ ಪದಕ ಗೆದ್ದಿದ್ದು ಈವರೆಗಿನ ದಾಖಲೆಯಾಗಿತ್ತು. ಅಮೆರಿಕದ ಸೈಕ್ಲಿಟ್ಸ್‌ ಜೆನ್ನಿಫರ್ ವ್ಯಾಲೆಂಟೆ ಅವರು ಓಮ್ನಿಯಮ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಉಳಿಸಿಕೊಂಡರು. ಅವರಿಗೆ ಇದು ಪ್ಯಾರಿಸ್‌ನಲ್ಲಿ ಎರಡನೇ ಚಿನ್ನವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.