ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು ಮೇಲೆ ನಿರೀಕ್ಷೆಯ ಭಾರ ಕೌಲಾಲಂಪುರ: ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು, ವಿರಾಮದ ಬಳಿಕ ಮಂಗಳವಾರ ಇಲ್ಲಿ ಆರಂಭವಾಗುವ ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮುನ್ನ ನಡೆಯುವ ಈ ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಸಿಂಧು ಉತ್ತಮ ಪ್ರದರ್ಶನದ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ. ಉಬರ್‌ ಮತ್ತು ಥಾಯ್ಲೆಂಡ್‌ ಓಪನ್‌ ಟೂರ್ನಿಯಿಂದ ದೂರ ಉಳಿದಿದ್ದ 28 ವರ್ಷದ ಆಟಗಾರ್ತಿ ಇಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 500 ಹಂತದ ಟೂರ್ನಿ ಇದಾಗಿದ್ದು, ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್‌ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದಿರುವ ಸಿಂಧು, ಪ್ರಸಕ್ತ ಋತುವಿನ ಆರು ಟೂರ್ನಿಗಳಲ್ಲಿ ಎರಡರಲ್ಲಿ ಮಾತ್ರ ಕ್ವಾರ್ಟರ್‌ಫೈನಲ್‌ ಹಂತ ತಲುಪಿದ್ದರು. 2022ರಲ್ಲಿ (ಸಿಂಗಪುರ ಓಪನ್‌) ಕೊನೆಯ ಪ್ರಶಸ್ತಿ ಗೆದ್ದಿರುವ ಸಿಂಧು, ಕಳೆದ ವರ್ಷದ ಸ್ಪೇನ್‌ ಮಾಸ್ಟರ್‌ನಲ್ಲಿ ರನ್ನರ್ಸ್‌ ಅಪ್‌ ಆಗಿದ್ದರು. ಇಲ್ಲಿ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಸ್ಕಾಟ್ಲೆಂಡ್ ಕಿರ್ಸ್ಟಿ ಗಿಲ್ಮೊರ್ ವಿರುದ್ಧ ಅಭಿಯಾನವನ್ನು ಆರಂಭಿಸಲಿದ್ದಾರೆ. ಯುವ ಆಟಗಾರ್ತಿಯರಾದ ಅಶ್ಮಿತಾ ಚಾಲಿಹಾ, ಆಕರ್ಷಿ ಕಶ್ಯಪ್ ಮತ್ತು ಮಾಳವಿಕಾ ಬನ್ಸೋಡ್ ಅವರು ಕ್ವಾಲಿಫೈಯರ್‌ ಹಂತದಲ್ಲಿ ಸ್ಪರ್ಧಿಸಲಿದ್ದಾರೆ. ಕಿರಣ್‌ ಜಾರ್ಜ್‌, ಪುರುಷರ ಸಿಂಗಲ್ಸ್‌ನಲ್ಲಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಆಟಗಾರನಾಗಿದ್ದು, ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಟಕುಮಾ ಒಬಯಾಶಿ ಅವರನ್ನು ಎದುರಿಸಲಿದ್ದಾರೆ. ಥಾಯ್ಲೆಂಡ್‌ ಓಪನ್‌ ಚಾಂಪಿಯನ್‌ಗಳಾದ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಟೂರ್ನಿಯಿಂದ ಹೊರಗುಳಿದಿದ್ದು, ಪುರುಷರ ಡಬಲ್ಸ್‌ನಲ್ಲಿ ಕೃಷ್ಣ ಪ್ರಸಾದ್‌ ಗರಗ ಮತ್ತು ಸಾಯಿ ಪ್ರತೀಕ್‌ ಕೆ. ಕಣದಲ್ಲಿದ್ದಾರೆ. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಬಿ. ಸುಮಿತ್ ರೆಡ್ಡಿ ಮತ್ತು ಎನ್.ಸಿಕ್ಕಿ ರೆಡ್ಡಿ ದಂಪತಿ ಹಾಗೂ ಸತೀಶ್ ಕುಮಾರ್ ಕರುಣಾಕರನ್ ಮತ್ತು ಆದ್ಯಾ ವರಿಯಾತ್ ಜೋಡಿಯು ಸುಧಾರಿತ ಪ್ರದರ್ಶನದ ವಿಶ್ವಾಸದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.