ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಸಿಂಧು; ಅಶ್ಮಿತಾ ನಿರ್ಗಮನ ಕ್ವಾಲಾಲಂಪುರ: ಭಾರತದ ಪಿ.ವಿ.ಸಿಂಧು ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟರು. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಹೋರಾಟದ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಹಾನ್ ಯು ಅವರನ್ನು ಸೋಲಿಸಿ ಸೆಮಿಫೈನಲ್ ತಲುಪಿದರು. ವಿಶ್ವ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿರುವ ಸಿಂಧು, ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 21–13, 14–21, 21–12 ರಿಂದ ಆರನೇ ಕ್ರಮಾಂಕದ ಆಟಗಾರ್ತಿ ಹಾನ್ ಅವರನ್ನು ಸೋಲಿಸಿದರು. ಆ ಮೂಲಕ ಕಳೆದ ತಿಂಗಳು ನಿಂಗ್ಬೊದಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚೀನಾ ಆಟಗಾರ್ತಿ ಎದುರು ಅನುಭವಿಸಿದ ಸೋಲಿಗೆ ಪ್ರತೀಕಾರ ತೀರಿಸಿಕೊಂಡರು.‌ ಸಿಂಧು ತಮ್ಮ ಮುಂದಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್‌ ಒಂಗ್ಬಾಮ್‌ರುಂಗ್ಫಾನ್ ಅವರನ್ನು ಎದುರಿಸಲಿದ್ದಾರೆ. ಥಾಯ್ಲೆಂಡ್‌ ಆಟಗಾರ್ತಿ ಇನ್ನೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇಂಡೊನೇಷ್ಯಾದ ವರ್ಧನಿ ಕುಸುಮಪುತ್ರಿ ಅವರನ್ನು 21–12, 21–23, 21–16 ರಿಂದ ಸೋಲಿಸಿದರು. ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಅಶ್ಮಿತಾ ಚಾಲಿಹಾ 10–21, 15–21 ರಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ, ಚೀನಾದ ಝಾಂಗ್‌ ಯಿ ಮನ್ ಅವರಿಗೆ ಮಣಿದರು. ಆ ಮೂಲಕ ಅಶ್ಮಿತಾ ಅಮೋಘ ಯಶಸ್ಸಿನ ಓಟ ಕೊನೆಗೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.