ಬ್ಯಾಡ್ಮಿಂಟನ್‌ | ಮತ್ತೆ ಅಗ್ರಸ್ಥಾನಕ್ಕೆ ಸಾತ್ವಿಕ್‌– ಚಿರಾಗ್‌ ನವದೆಹಲಿ: ಥಾಯ್ಲೆಂಡ್ ಓಪನ್‌ ಪ್ರಶಸ್ತಿ ಗೆದ್ದ ಭಾರತದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಬ್ಯಾಡ್ಮಿಂಟನ್‌ ಪುರುಷರ ಡಬಲ್ಸ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದರು. ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ ಬಳಿಕ ಭಾರತದ ಜೋಡಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ನಂತರ ಚೀನಾದಲ್ಲಿ ನಡೆದ ಏಷ್ಯಾ ಚಾಂಪಿಯನ್‌ಷಿಪ್‌ ವೇಳೆ ಸಾತ್ವಿಕ್‌ ಗಾಯಾಳಾದ ಕಾರಣ ವಾಕ್‌ಓವರ್ ನೀಡಿದ್ದರು. ಥಾಯ್ಲೆಂಡ್ ಓಪನ್‌ನಲ್ಲಿ ಮತ್ತೆ ಲಯ ಕಂಡುಕೊಂಡ ಭಾರತದ ಸ್ಟಾರ್‌ ಆಟಗಾರರು ಭಾನುವಾರ ನಡೆದ ಫೈನಲ್‌ನಲ್ಲಿ ಚೀನಾದ ಚೆನ್ ಬೊ ಯಾಂಗ್ ಮತ್ತು ಲಿಯು ಯಿ ವಿರುದ್ಧ ನೇರ ಗೇಮ್‌ಗಳ ಗೆಲುವಿನೊಂದಿಗೆ ಋತುವಿನ ಎರಡನೇ ಪ್ರಶಸ್ತಿಯನ್ನು ಗೆದ್ದರು. ಮಂಗಳವಾರ ಬಿಡುಗಡೆಯಾದ ಬಿಡಬ್ಲ್ಯುಎಫ್‌ ಕ್ರಮಾಂಕದಲ್ಲಿ ಸಾತ್ವಿಕ್‌– ಚಿರಾಗ್‌ ಜೋಡಿಯು 99,670 ಪಾಯಿಂಟ್ಸ್‌ಗಳೊಂದಿಗೆ ಎರಡು ಸ್ಥಾನಗಳ ಬಡ್ತಿ ಪಡೆಯಿತು. ಮಾಜಿ ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಕುಸಿದು 15ನೇ ಸ್ಥಾನದಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್. ಪ್ರಣಯ್ ತಮ್ಮ 9ನೇ ಕ್ರಮಾಂಕವನ್ನು ಕಾಯ್ದುಕೊಂಡಿದ್ದಾರೆ. 11ನೇ ಸ್ಥಾನದಲ್ಲಿದ ಲಕ್ಷ್ಯ ಸೇನ್ 14ನೇ ಸ್ಥಾನಕ್ಕೆ ಜಾರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.