ಆರ್ಚರಿ ವಿಶ್ವಕಪ್‌: ಮಹಿಳಾ ಕಾಂಪೌಂಡ್‌ ತಂಡಕ್ಕೆ ಚಿನ್ನ ಯೆಚಿಯಾನ್, ದಕ್ಷಿಣ ಕೊರಿಯಾ: ಜ್ಯೋತಿ ಸುರೇಖಾ ವೆನ್ನಂ, ಪರ್ಣೀತ್ ಕೌರ್ ಮತ್ತು ಅದಿತಿ ಸ್ವಾಮಿ ಅವರನ್ನು ಒಳಗೊಂಡ ಭಾರತ ಮಹಿಳಾ ಕಾಂಪೌಂಡ್‌ ತಂಡವು ಸತತ ಮೂರನೇ ಆರ್ಚರಿ ವಿಶ್ವಕಪ್‌ನಲ್ಲಿ (ಸ್ಟೇಜ್‌ 2) ಚಿನ್ನದ ಪದಕವನ್ನು ಗೆದ್ದುಕೊಂಡರೆ, ಭಾರತದ ಮಿಶ್ರ ತಂಡವು ಬೆಳ್ಳಿಗೆ ತೃಪ್ತಿಪಟ್ಟಿತು. ಶನಿವಾರ ನಡೆದ ಫೈನಲ್‌ ಸ್ಪರ್ಧೆಯಲ್ಲಿ ವಿಶ್ವ ಅಗ್ರಮಾನ್ಯ ಭಾರತ ತಂಡವು 232– 226 ಅಂತರದಿಂದ ಹಜಾಲ್ ಬುರುನ್, ಅಯ್ಸೆ ಬೆರಾ ಸುಜರ್ ಮತ್ತು ಬೇಗಮ್ ಯುವಾ ಅವರನ್ನು ಒಳಗೊಂಡ ಟರ್ಕಿ ತಂಡವನ್ನು ಮಣಿಸಿತು. ಜ್ಯೋತಿ, ಪರ್ಣೀತ್ ಮತ್ತು ವಿಶ್ವ ಚಾಂಪಿಯನ್ ಅದಿತಿ ಈ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಚಿನ್ನದ ಸಾಧನೆ ಮೆರೆದರು. ಈ ಮೂವರ ತಂಡವು ಕಳೆದ ತಿಂಗಳು ಶಾಂಘೈನಲ್ಲಿ ನಡೆದ ಋತುವಿನ ಆರಂಭಿಕ ವಿಶ್ವಕಪ್‌ನಲ್ಲಿ (ಸ್ಟೇಜ್‌ 1) ಇಟಲಿಯನ್ನು ಮಣಿಸಿ ಚಿನ್ನ ಗೆದ್ದಿತ್ತು. ಅಲ್ಲದೆ, ಕಳೆದ ವರ್ಷದ ಆಗಸ್ಟ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲೂ (ಸ್ಟೇಜ್‌ 4) ಅವರು ಚಾಂಪಿಯನ್‌ ಆಗಿದ್ದರು. ‘ಈ ಸಾಧನೆಯನ್ನು ನಿಜಕ್ಕೂ ನಂಬಲಾಗುತ್ತಿಲ್ಲ. ನಾವೆಲ್ಲರೂ ಸ್ಥಿರ ಪ್ರದರ್ಶನ ನೀಡುತ್ತಿದ್ದೇವೆ. ಪಂದ್ಯದ ವೇಳೆ ಅತ್ಯುತ್ತಮ ಗುರಿಯತ್ತ ಗಮನ ಹರಿಸುತ್ತೇವೆ. ಹೀಗಾಗಿ, ಪದಕ ಗೆಲ್ಲಲು ಸಾಧ್ಯವಾಯಿತು’ ಎಂದು ಅದಿತಿ ಪ್ರತಿಕ್ರಿಯಿಸಿದರು. ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ ಜ್ಯೋತಿ ಅವರು ತನ್ನ ತೆಕ್ಕೆಗೆ ಎರಡನೇ ಚಿನ್ನವನ್ನು ಸೇರಿಸಲು ವಿಫಲರಾದರು. ಜ್ಯೋತಿ ಮತ್ತು ಪ್ರಿಯಾಂಶು ಅವರನ್ನು ಒಳಗೊಂಡ ಮಿಶ್ರ ತಂಡವು ಎರಡು ಪಾಯಿಂಟ್ಸ್‌ಗಳಿಂದ ಅಗ್ರಸ್ಥಾನವನ್ನು ಕಳೆದುಕೊಂಡಿತು. ಅಮೆರಿಕದ ಒಲಿವಿಯಾ ಡೀನ್ ಮತ್ತು ಸಾಯರ್ ಸುಲ್ಲಿವನ್ 155–153 ಅಂತರದಿಂದ ಚಿನ್ನ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.