ಬಾಕ್ಸಿಂಗ್‌: ಅಭಿಮನ್ಯು ಮುನ್ನಡೆ ಬ್ಯಾಂಕಾಕ್‌: ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಅಭಿಮನ್ಯು ಲೂರಾ, ಒಲಿಂಪಿಕ್ಸ್‌ ಬಾಕ್ಸಿಂಗ್ ವಿಶ್ವ ಕ್ವಾಲಿಫೈಯರ್‌ ಟೂರ್ನಿಯಲ್ಲಿ ಬಲ್ಗೇರಿಯಾದ ಕ್ರಿಸ್ಟಿಯಾನ್ ನಿಕೊಲವ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಮುನ್ನಡೆದರು. ಶನಿವಾರ ನಡೆದ ಪುರುಷರ 80 ಕೆಜಿ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಭಾರತದ 21 ವರ್ಷದ ಬಾಕ್ಸರ್‌ ಲೂರಾ 3–0ಯಿಂದ ಹತ್ತು ಬಾರಿಯ ಬಲ್ಗೇರಿಯನ್ ರಾಷ್ಟ್ರೀಯ ಚಾಂಪಿಯನ್ ನಿಕೊಲವ್‌ ಅವರನ್ನು ಮಣಿಸಿದರು. ಶುಕ್ರವಾರ 57 ಕೆಜಿ ವಿಭಾಗದಲ್ಲಿ ಸಚಿನ್ ಸಿವಾಚ್ ಅವರು ನ್ಯೂಜಿಲೆಂಡ್‌ನ ಅಲೆಕ್ಸ್ ಮುಕುಕಾ ವಿರುದ್ಧ ಜಯಗಳಿಸಿ ಭಾರತದ ಗೆಲುವಿನ ಖಾತೆ ತೆರೆದಿದ್ದರು. ಇಲ್ಲಿ ನಡೆಯುತ್ತಿರುವ ಎರಡನೇ ಕ್ವಾಲಿಫೈಯರ್‌ ಟೂರ್ನಿಯಲ್ಲಿ ಭಾರತ ಏಳು ಪುರುಷರು ಮತ್ತು ಮೂರು ಮಹಿಳಾ ಬಾಕ್ಸರ್‌ಗಳು ಸ್ಪರ್ಧಿಸುತ್ತಿದ್ದಾರೆ. ಅಭಿನಾಶ್ ಜಮ್ವಾಲ್ (63.5 ಕೆಜಿ) ಮತ್ತು ನಿಶಾಂತ್ ದೇವ್ (71 ಕೆಜಿ) ಭಾನುವಾರ ಸ್ಪರ್ಧಾ ಕಣಕ್ಕೆ ಇಳಿಯುವರು. ನಿಖತ್ ಜರೀನ್ (50 ಕೆಜಿ), ಪ್ರೀತಿ (54 ಕೆಜಿ), ಮತ್ತು ಲವ್ಲಿನಾ ಬೊರ್ಗೊಹೈನ್ (75 ಕೆಜಿ) ಅವರು ಏಷ್ಯನ್ ಕ್ರೀಡಾಕೂಟದ ಮೂಲಕ ಈಗಾಗಲೇ ಪ್ಯಾರಿಸ್‌ ಕೋಟಾ ಪಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.