ಸ್ಟೀಪಲ್‌ ಚೇಸ್‌: ಸಾಬಳೆಗೆ 11ನೇ ಸ್ಥಾನ ಪ್ಯಾರಿಸ್‌: ಭಾರತದ ಅವಿನಾಶ್‌ ಸಾಬಳೆ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ಪುರುಷರ 3,000 ಮೀ. ಸ್ಟೀಪಲ್‌ ಚೇಸ್‌ ಫೈನಲ್‌ ರೇಸ್‌ನಲ್ಲಿ 11ನೇ ಸ್ಥಾನ ಪಡೆದರು. ಆರಂಭದಲ್ಲಿ ಕೊಂಚ ಮುನ್ನಡೆಯಲ್ಲಿದ್ದ 29 ವರ್ಷ ವಯಸ್ಸಿನ ಸಾಬ್ಳೆ ಅವರು 8 ನಿಮಿಷ 14.18 ಸೆ.ಗಳಲ್ಲಿ ಗುರಿ ತಲುಪಿದರು. ಇತ್ತೀಚೆಗೆ ಪ್ಯಾರಿಸ್‌ನಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌ನಲ್ಲಿ 8 ನಿಮಿಷ 09.91 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಸಾಬಳೆ ಉತ್ತಮಪಡಿಸಿಕೊಂಡಿದ್ದರು. ಟೋಕಿಯೊದಲ್ಲಿ ಕೂಟದಲ್ಲಿ ಚಿನ್ನ ಗೆದ್ದಿದ್ದ ಮೊರಾಕ್ಕೊದ ಸೊಫಿಯಾನ್ ಅಲ್‌ ಬಕಾಲಿ ಅವರು ಪ್ರಶಸ್ತಿಯನ್ನು ಉಳಿಸಿಕೊಂಡರು. ಈ ಋತುವಿನಲ್ಲಿ ಶ್ರೇಷ್ಠ 8 ನಿಮಿಷ 06.05 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಅಮೆರಿಕದ ಕೆನ್ನೆತ್‌ ರೂಕ್ಸ್‌ (8 ನಿ 06.41 ಸೆ) ಮತ್ತು ಕೆನ್ಯಾದ ಅಬ್ರಹಾಮ್‌ ಕಿಬಿವೊಟ್‌ (8 ನಿ 06.47 ಸೆ) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡರು. ತಮ್ಮ ಹೆಸರಿನಲ್ಲಿ ವಿಶ್ವ ದಾಖಲೆ ಹೊಂದಿರುವ ಇಥಿಯೋಪಿಯಾದ ಲಮೆಚಾ ಗರ್ಮಾ ಟ್ರ್ಯಾಕ್‌ನಲ್ಲಿ ಬಿದ್ದಿದ್ದರಿಂದ ರೇಸ್‌ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.