| ರೇಸ್‌ ವಾಕ್‌ ಮಿಶ್ರ ರಿಲೆ: ಸ್ಪೇನ್‌ಗೆ ಚಿನ್ನ ಪ್ಯಾರಿಸ್‌ : ಒಲಿಂಪಿಕ್ಸ್‌ನ ಚೊಚ್ಚಲ ಮ್ಯಾರಥಾನ್‌ ರೇಸ್‌ ವಾಕ್‌ ಮಿಶ್ರ ರಿಲೆ ಸ್ಪರ್ಧೆಯಲ್ಲಿ ಸ್ಪೇನ್‌ನ ಅಲ್ವರೊ ಮಾರ್ಟಿನ್‌ ಮತ್ತು ಮರಿಯಾ ಪೆರೆಝ್‌ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು. ಈ ಜೋಡಿಯು 2 ಗಂಟೆ 50 ನಿಮಿಷ 30 ಸೆಕೆಂಡುಗಳಲ್ಲಿ ಗುರಿ ತಲುಪಿತು. ಪುರುಷರ 20 ಕೀ.ಮಿ. ವಾಕ್‌ ಚಾಂಪಿಯನ್‌ ಬ್ರಿಯಾನ್‌ ಪಿಂಟಾಡೊ ಅವರನ್ನೊಳಗೊಂಡ ಈಕ್ವೆಡಾರ್‌ನ ಜೋಡಿಯು 2 ಗಂಟೆ 51 ನಿಮಿಷ 22 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆಯಿತು. 2 ಗಂಟೆ 51 ನಿಮಿಷ 38 ಸೆಕೆಂಡುಗಳಲ್ಲಿ ಗುರಿ ತಲುಪಿದ ಆಸ್ಟ್ರೇಲಿಯಾದ ಜೋಡಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕಳೆದ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಮಾರ್ಟಿನ್ ಮತ್ತು ಪೆರೆಜ್ ಇಬ್ಬರೂ ತಲಾ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಸೂರಜ್, ಪ್ರಿಯಾಂಕಾ ವಿಫಲ: ಭಾರತದ ಸೂರಜ್‌ ಪನ್ವರ್‌ ಮತ್ತು ಪ್ರಿಯಾಂಕಾ ಗೋಸ್ವಾಮಿ ಜೋಡಿಯು ಸ್ಪರ್ಧೆಯನ್ನು ಮುಕ್ತಾಯಗೊಳಿಸಲಿಲ್ಲ. ಪ್ರಿಯಾಂಕಾ ಅವರು ರೇಸ್‌ನ ನಾಲ್ಕನೇ ಹಾಗೂ ಅಂತಿಮ ಲೆಗ್‌ನಲ್ಲಿ ಸ್ಟರ್ಧೆಯಿಂದ ಹೊರಬಿದ್ದರು. ಭಾರತದ ಜೋಡಿಯ ಅಭಿಯಾನವು 33 ಕಿ.ಮೀ. ಕ್ರಮಿಸಿದ ನಂತರ ಕೊನೆಗೊಂಡಿತು. ಮೂರನೇ ಬದಲಾವಣೆಯ ನಂತರ ಸಂಪರ್ಕದ ನಷ್ಟ ಮತ್ತು ಮೊಣಕಾಲು ಬಾಗುವಿಕೆ ಕಾರಣ ನಿಯಮ ಉಲ್ಲಂಘನೆಯಿಂದಾಗಿ ಹೊರಬೀಳಬೇಕಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.