ಒಲಿಂಪಿಕ್ಸ್‌ನಲ್ಲಿ ಅಂತಿಮ್‌ ಸವಾಲು ಅಂತ್ಯ ಪ್ಯಾರಿಸ್‌: ಪ್ಯಾರಿಸ್‌ ಕೂಟದಲ್ಲಿ ಭಾರತದ ಪದಕದ ಭರವಸೆಯಾಗಿದ್ದ ಅಂತಿಮ್‌ ಪಂಘಲ್‌ ಬುಧವಾರ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ. ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಅವರು 0–10ರ ಅಂತರದಿಂದ ಟರ್ಕಿಯ ಯೆಟ್ಗಿಲ್‌ ಝೆನೆಪ್‌ ವಿರುದ್ಧ ಹೀನಾಯ ಸೋಲನುಭವಿಸಿದರು. ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ್ದ 19 ವರ್ಷ ವಯಸ್ಸಿನ ಅಂತಿಮ್‌ ಅವರು ರೆಪೆಷಾಜ್‌ ಮೂಲಕ ಕಂಚಿನ ಪದಕ ಸ್ಪರ್ಧೆಯಲ್ಲಿ ಉಳಿಯುವ ಆಸೆ ಕೂಡಾ ಭಗ್ನವಾಯಿತು. ಝೆನೆಪ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಜರ್ಮನಿಯ ಅನ್ನಿಕಾ ವೆಂಡ್ಲೆ ವಿರುದ್ಧ ಸೋಲನುಭವಿಸಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತರಾಗಿರುವ ಅಂತಿಮ್‌ ಅವರು ಈ ಹಿಂದೆ ವಿನೇಶ್‌ ಫೋಗಟ್‌ ಸ್ಪರ್ಧಿಸುತ್ತಿದ್ದ ಒಲಿಂಪಿಕ್ಸ್‌ ಕೋಟಾವನ್ನು ಗಳಿಸಿದವರಲ್ಲಿ ಮೊದಲಿಗರಾಗಿದ್ದರು. ಮೊದಲ ಸುತ್ತಿನಲ್ಲಿ ಅವರು 101 ಸೆಕೆಂಡುಗಳಲ್ಲಿ ಮಣಿದರು. ಅಂತಿಮ್‌ ಅವರಿಗಿಂತ 10 ಅಂಕಗಳ ಮುನ್ನಡೆ ಸಾಧಿಸಿದ್ದ ಟರ್ಕಿಯ ಕುಸ್ತಿಪಟು ‘ತಾಂತ್ರಿಕ ಶ್ರೇಷ್ಠತೆ’ ಆಧಾರದಲ್ಲಿ ಜಯಶಾಲಿಯಾದರು. ಝೆನೆಪ್ ಅವರು ಅಂತಿಮ್ ಮೇಲೆ ಮೊದಲು ಹಿಡಿತ ಸಾಧಿಸಿ ಎರಡು ಅಂಕ ಗಳಿಸಿದರು. ನಂತರ ಮತ್ತೆರಡು ಅಂಕಗಳನ್ನು ತಮ್ಮದಾಗಿಸಿಕೊಂಡರು. ನಂತರ ಎದುರಾಳಿ ಮೇಲೆ ಮತ್ತೆ ಹಿಡಿತ ಸಾಧಿಸಿ ನಾಲ್ಕು ಅಂಕಗಳನ್ನು ಪಡೆದರು. ರೆಫ್ರಿ ಪಂದ್ಯವನ್ನು ನಿಲ್ಲಿಸುತ್ತಲೇ ಅಂತಿಮ್ ಕಣ್ಣೀರಾದರು. ಅವರು ಈ ಕ್ರೀಡೆಗಳಲ್ಲಿ ಹೊರಬಿದ್ದ ದೇಶದ ಮೂರನೇ ಕುಸ್ತಿಪಟುವಾಗಿದ್ದಾರೆ. ನಿಶಾ ದಹಿಯಾ ಅವರ (68 ಕೆ.ಜಿ) ಅಭಿಯಾನವು ಸೋಮವಾರ ಕೊನೆಗೊಂಡಿತ್ತು. 50 ಕೆ.ಜಿ. ವಿಭಾಗದಲ್ಲಿ ಒಲಿಂಪಿಕ್ಸ್‌ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದ ವಿನೇಶ್ ಅನರ್ಹಗೊಂಡಿದ್ದರು. - - ಅನು ಜ್ಯೋತಿಗೆ ನಿರಾಸೆ...: ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅನು ರಾಣಿ ಮತ್ತು ಮಹಿಳೆಯರ 100 ಮೀಟರ್ ಹರ್ಡಲ್ಸ್ ಮೊದಲ ಸುತ್ತಿನಲ್ಲಿ ಜ್ಯೋತಿ ಯರ್‍ರಾಜಿ ಪ್ರಭಾವಿ ಎನಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. 31 ವರ್ಷದ ಅನು ರಾಣಿ ಅರ್ಹತಾ ಸುತ್ತಿನಲ್ಲಿ 55.81 ಮೀಟರ್ ಜಾವೆಲಿನ್ ಎಸೆದು 15ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮತ್ತೊಂದೆಡೆ ಮಹಿಳೆಯರ 100 ಮೀಟರ್ ಹರ್ಡಲ್ಸ್ ಮೊದಲ ಸುತ್ತಿನಲ್ಲಿ ಜ್ಯೋತಿ 7ನೇಯವರಾಗಿ (12.78 ಸೆಕೆಂಡು) ಗುರಿ ಮುಟ್ಟಿದರು. ಆ ಮೂಲಕ ಸೆಮಿಪೈನಲ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.