ಆಳ–ಅಗಲ | ತೂಕ ಇಳಿಸುವ ಪ್ರಯಾಸ ಕ್ರೀಡಾಪಟುಗಳ ಸಾಧನೆಯನ್ನು ಅವರು ಸಾಧಿಸುವ ಗೆಲುವುಗಳು, ಪಡೆಯುವ ಟ್ರೋಫಿಗಳು, ಪದಕಗಳಿಂದ ಎಲ್ಲರೂ ಅಳೆಯುತ್ತಾರೆ. ಆ ಸಾಧನೆಯ ಹಿಂದೆ ಕಠಿಣ ಪರಿಶ್ರಮ ಇರುತ್ತದೆ. ಅದಕ್ಕಾಗಿ ದೇಹವನ್ನು ಇನ್ನಿಲ್ಲದಂತೆ ದಂಡಿಸಿರುತ್ತಾರೆ. ಕ್ರೀಡೆ ದೈಹಿಕ ಸಾಮರ್ಥ್ಯವನ್ನು ಬಯಸುತ್ತದೆ. ತೂಕವೂ ಬಹಳ ಮುಖ್ಯ. ಅದರಲ್ಲೂ ವಿವಿಧ ತೂಕದ ವಿಭಾಗಗಳಲ್ಲಿ ನಡೆಯುವ ಕುಸ್ತಿ, ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌, ಪವರ್‌ಲಿಫ್ಟಿಂಗ್‌, ಜೂಡೊ ಕ್ರೀಡೆಗಳಲ್ಲಿ ಕ್ರೀಡಾಳುಗಳ ತೂಕವೇ ಪ್ರಧಾನ. ಒಂದಿನಿತು ವ್ಯತ್ಯಾಸವಾದರೂ, ಕ್ರೀಡಾಳುಗಳು ಬಹುದೊಡ್ಡ ಅವಕಾಶದಿಂದ ವಂಚಿತರಾಗುತ್ತಾರೆ. ಅದಕ್ಕೆ ವಿನೇಶ್‌ ಫೋಗಟ್‌ ಅವರೇ ತಾಜಾ ಉದಾಹರಣೆ. ಸ್ಪರ್ಧೆಗಳ ಸಂದರ್ಭದಲ್ಲಿ ತೂಕ ಕಾಯ್ದುಕೊಳ್ಳಲು ಕ್ರೀಡಾಪಟುಗಳು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಆಟ ಬೇಡುವಂತೆ ತೂಕ ಇಳಿಸುವುದು, ಗಳಿಸುವುದು ಕ್ರೀಡಾಳುಗಳ ಮುಂದಿರುವ ದೊಡ್ಡ ಸವಾಲು. ವೈದ್ಯರು, ತರಬೇತುದಾರರು, ಪೌಷ್ಟಿಕ ಆಹಾರ ತಜ್ಞರ ತಂಡ‌ದ ಮೇಲ್ವಿಚಾರಣೆಯಲ್ಲಿ ತಮ್ಮ ದೇಹದ ತೂಕವನ್ನು ನಿಗದಿತ ಮಟ್ಟಕ್ಕೆ ತರುತ್ತಾರೆ. ‘ತೂಕ ಕಾಯ್ದುಕೊಳ್ಳುವುದಕ್ಕಾಗಿ ಎರಡು ದಿನಗಳ ಕಾಲ ನಾನು ಆಹಾರ ಮತ್ತು ನೀರು ಸೇವಿಸಿರಲಿಲ್ಲ. ಇದರಿಂದಾಗಿ ಶಕ್ತಿಯನ್ನು ಕಳೆದುಕೊಂಡಿದ್ದೆ’ ಎಂದು ಭಾರತದ ಬಾಕ್ಸರ್‌ ನಿಖತ್‌ ಝರೀನ್‌, ಈ ಒಲಿಂಪಿಕ್ಸ್‌ನಲ್ಲಿ ಸೋತ ಬಳಿಕ ಹೇಳಿದ್ದರು. ‘ತೂಕ ಕಡಿಮೆ ಮಾಡಿಕೊಳ್ಳುವ ಪ್ರಯಾಸಕರವಾದ ಪ್ರಕ್ರಿಯೆಯಲ್ಲಿ ತೊಡಗುವ ಕ್ರೀಡಾಪಟುಗಳು ಪದಕಕ್ಕೆ ಅರ್ಹರು’ ಎಂದು ಹಿಂದೊಮ್ಮೆ ಕುಸ್ತಿಪಟು ಸಾಕ್ಷಿ ಮಲ್ಲಿಕ್‌ ತಮಾಷೆಯಾಗಿ ಹೇಳಿದ್ದರು. ಈ ಎರಡು ಹೇಳಿಕೆಗಳೇ, ಕ್ರೀಡೆಯಲ್ಲಿ ತೂಕ ಎಷ್ಟು ಮುಖ್ಯ. ಅದನ್ನು ಕಾಪಾಡಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ವಿವರಿಸುತ್ತವೆ. ಕುಸ್ತಿ ಪಂದ್ಯದ ದಿನ ಬೆಳಿಗ್ಗೆ ಕುಸ್ತಿಪಟುಗಳ ತೂಕ ಪರೀಕ್ಷೆ ಮಾಡಲಾಗುತ್ತದೆ. ತೂಕ ಮಾಡುವ ಪ್ರಕ್ರಿಯೆ 30 ನಿಮಿಷಗಳ ಕಾಲ ನಡೆಯುತ್ತದೆ. ಎರಡನೇ ದಿನ ಬೆಳಿಗ್ಗೆ ಫೈನಲ್‌ ಮತ್ತು ರೆಪೆಷಾಜ್‌ನಲ್ಲಿ ಹೋರಾಡುವ ಕುಸ್ತಿಪಟುಗಳ ತೂಕವನ್ನು ಅಳೆಯಲಾಗುತ್ತದೆ. ಇದು 15 ನಿಮಿಷಗಳ ಕಾಲ ನಡೆಯುತ್ತದೆ. ಪರೀಕ್ಷೆ ವೇಳೆಯಲ್ಲಿ ಕುಸ್ತಿಪಟುಗಳು ಪರಿಪೂರ್ಣ ದೈಹಿಕ ಸಾಮರ್ಥ್ಯ ಹೊಂದಿರಬೇಕು. ಉಗುರುಗಳನ್ನು ಅತ್ಯಂತ ಚಿಕ್ಕದಾಗಿ ಕತ್ತರಿಸಿರಬೇಕು. ಒಂದು ವೇಳೆ ಸ್ಪರ್ಧಿಯು ಮೊದಲ ಮತ್ತು ಎರಡನೇ ತೂಕ ಪರೀಕ್ಷೆಯಲ್ಲಿ ಪಾಲ್ಗೊಳ್ಳದಿದ್ದರೆ ಅಥವಾ ಅದರಲ್ಲಿ ವಿಫಲವಾದರೆ ಸ್ಪರ್ಧೆಯಿಂದ ಅನರ್ಹಗೊಳ್ಳುತ್ತಾರೆ ಮತ್ತು ಪಟ್ಟಿಯಲ್ಲಿ ರ‍್ಯಾಂಕ್‌ ರಹಿತವಾಗಿ ಕೊನೆಯ ಸ್ಥಾನ ನೀಡಲಾಗುತ್ತದೆ. ವಿನೇಶ್‌ ಫೋಗಟ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಈಗ ಅನರ್ಹರಾದ ವಿನೇಶ್‌ ಫೋಗಟ್‌ ಅವರೇ 2016ರ ರಿಯೊ ಒಲಿಂಪಿಕ್ಸ್‌ಗೂ ಮೊದಲು ನಡೆದ ಏಷ್ಯನ್‌ ಕ್ವಾಲಿಫೈರ್ಸ್‌ನಲ್ಲಿ 48 ಕೆಜಿ ವಿಭಾಗದಲ್ಲಿ ತೂಕ ಜಾಸ್ತಿ ಇದ್ದ ಕಾರಣಕ್ಕೆ ಅನರ್ಹಗೊಂಡಿದ್ದರು. ಇಮಾನ್ಯುಲಾ ಲುಝಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮಂಗಳವಾರ ನಡೆದ ಕುಸ್ತಿಯಲ್ಲಿ ಇಟಲಿಯ ಸ್ಪರ್ಧಿಯಾಗಿದ್ದ, 24 ವರ್ಷದ ಇಮಾನ್ಯುಲಾ ಲುಝಿ ಅವರು 50 ಕೆಜಿ ವಿಭಾಗ ಫ್ರೀಸ್ಟೈಲ್‌ನಲ್ಲಿ ನಿಗದಿಗಿಂತ ಹೆಚ್ಚು ತೂಕ ಇದ್ದ ಕಾರಣಕ್ಕೆ ಪ್ರಾಥಮಿಕ ಬೌಟ್‌ನಿಂದ ಅನರ್ಹಗೊಂಡಿದ್ದರು. ಮೆಸ್ಸೌದ್ ರಿಡೌನ್ ಡ್ರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಜುಲೈ 29ರಂದು ಜೂಡೊ ಪಂದ್ಯದಲ್ಲಿ ಅಲ್ಜೀರಿಯಾದ ಮೆಸ್ಸೌದ್‌ ರಿಡೌನ್‌ ಡ್ರಿಸ್‌ ಅವರು ಇಸ್ರೇಲ್‌ನ ತೊಹುರ್‌ ಬಬ್ಟುಲ್‌ ಅವರನ್ನು ಎದುರಿಸಬೇಕಿತ್ತು. ತೂಕ ಪರೀಕ್ಷೆಯಲ್ಲಿ 400 ಗ್ರಾಂ ತೂಕ ಹೆಚ್ಚಿದ್ದರಿಂದ ಅವರು ಸ್ಪರ್ಧೆಯಿಂದ ಹೊರ ಬಿದ್ದಿದ್ದರು. ಜೆಡೆನ್ ಕಾಕ್ಸ್‌: 2016ರ ರಿಯೊ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ ಅಮೆರಿಕದ ಜೆಡೆನ್‌ ಕಾಕ್ಸ್‌ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನ ಅಮೆರಿಕದಲ್ಲಿ ನಡೆದ ಕುಸ್ತಿ ಟ್ರಯಲ್ಸ್‌ನಲ್ಲಿ ತೂಕ ಜಾಸ್ತಿ ಇದ್ದ ಕಾರಣಕ್ಕೆ 97 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಂಡಿದ್ದರು. ಆಧಾರ: ಪಿಟಿಐ, ಯುಡಬ್ಲ್ಯುಡಬ್ಲ್ಯು ನಿಯಮಗಳು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.