ಅಮೆರಿಕ ಓಪನ್: ಸೆಮಿಗೆ ಮಾಳವಿಕಾ ಬನ್ಸೋಡ್ ಫೋರ್ಟ್‌ ವರ್ತ್‌ (ಅಮೆರಿಕ): ಭಾರತದ ಮಾಳವಿಕಾ ಬನ್ಸೋಡ್ ಅವರು ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮೊರ್‌ ಅವರನ್ನು ಮಣಿಸಿ ಅಮೆರಿಕ ಓಪನ್ ಸೂಪರ್‌ 300 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಏಳನೇ ಶ್ರೇಯಾಂಕದ ನಾಗಪುರದ 22 ವರ್ಷದ ಮಾಳವಿಕಾ 10–21, 21–15, 21–10 ಅಂತರದಲ್ಲಿ 2014ರ ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತೆ ಮೂರನೇ ಶ್ರೇಯಾಂಕದ ಕ್ರಿಸ್ಟಿ ಅವರನ್ನು ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಜಪಾನಿನ ನಟ್ಸುಕಿ ನಿಡೈರಾ ಅವರನ್ನು ಎದುರಿಸಲಿದ್ದಾರೆ. 2022ರಲ್ಲಿ ನಡೆದ ಹೈಲೋ ಓಪನ್‌ನಲ್ಲಿ ಕ್ರಿಸ್ಟಿ ಅವರನ್ನು ಮಾಳವಿಕಾ ಸೋಲಿಸಿದ್ದರು. ಆದರೆ, ಈ ಹಿಂದೆ ಕ್ರಿಸ್ಟಿ ವಿರುದ್ಧ ಎರಡು ಬಾರಿ ಅವರು ಸೋತಿದ್ದರು. ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಿಯಾಂಶು ರಾಜವತ್ ಅವರು 21-15, 11-21, 18-21ರಿಂದ ನಾಲ್ಕನೇ ಶ್ರೇಯಾಂಕದ ಲೀ ಲಾನ್ ಕ್ಸಿ (ಚೀನಾ) ಅವರಿಗೆ ಸೋತರು. ಎಂಟರ ಘಟ್ಟದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್‌ 17–21, 21–17, 19–21ರಲ್ಲಿ ಆರನೇ ಶ್ರೇಯಾಂಕದ ಜಪಾನಿನ ರುಯಿ ಹಿರೊಕಮಿ ಮತ್ತು ಯುನಾ ಕಟೊ ಜೋಡಿ ವಿರುದ್ಧ ಸೋತರು. ಮೊದಲ ಸುತ್ತಿನಲ್ಲಿ ಭಾರತದ ಜೋಡಿ ಬೈ ಪಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.