ಸಾತ್ವಿಕ್‌–ಚಿರಾಗ್‌ಗೆ ಸುಲಭದ ಗುಂಪು ನವದೆಹಲಿ : ಭಾರತದ ತಾರಾ ಬ್ಯಾಡ್ಮಿಂಟನ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರಿಗೆ ಇದೇ ತಿಂಗಳ 26ರಂದು ಪ್ಯಾರಿಸ್‌ನಲ್ಲಿ ಆರಂಭವಾಗುವ ಒಲಿಂಪಿಕ್ ಕ್ರೀಡೆಗಳ ಗುಂಪು ಹಂತದಲ್ಲಿ ಅನುಕೂಲಕರ ‘‍ಡ್ರಾ’ ದೊರಕಿದೆ. ಥಾಮಸ್‌ ಕಪ್‌ ಟೂರ್ನಿಯಲ್ಲಿ ಚಿನ್ನ ಗೆದ್ದಿರುವ ಸಾತ್ವಿಕ್‌–ಚಿರಾಗ್‌ ಜೋಡಿ ಮೂರನೇ ಶ್ರೇಯಾಂಕ ಗಳಿಸಿದ್ದು ‘ಸಿ’ ಗುಂಪಿನಲ್ಲಿದೆ. ವಿಶ್ವ ಮಾಜಿ ಅಗ್ರಕ್ರಮಾಂಕದ ಆಟಗಾರರು, ಚಿನ್ನದ ಪದಕ ಗೆಲ್ಲುವ ನೆಚ್ಚಿನ ಜೋಡಿಯಾಗಿ ಗುರುತಿಸಿಕೊಂಡಿದೆ. ಇದೇ ಗುಂಪಿನಲ್ಲಿ ವಿಶ್ವ ಆರನೇ ಕ್ರಮಾಂಕದ ಜೋಡಿ ಇಂಡೋನೆಷ್ಯಾದ ಫಜರ್ ಅಲ್ಫಿಯಾನ್ –ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಕೂಡಾ ಇದ್ದಾರೆ. ಸಾತ್ವಿಕ್‌ ಮತ್ತು ಚಿರಾಗ್‌ ಅವರಿಗೆ ಇಂಡೋನೆಷ್ಯಾದ ಈ ಜೋಡಿ ಕಠಿಣ ಸ್ಪರ್ಧೆ ನೀಡಬಹುದು. ಇದೇ ಗುಂಪಿನಲ್ಲಿರುವ ವಿಶ್ವ 31ನೇ ಕ್ರಮಾಂಕದ ಮಾರ್ಕ್ ಲ್ಯಾಮ್ಸ್‌ಫಸ್ ಮತ್ತು ಮಾರ್ವಿನ್‌ ಸೀಡೆಲ್ (ಜರ್ಮನಿ) ಹಾಗೂ 43ನೇ ಕ್ರಮಾಂಕದ ಜೋಡಿ ಲ್ಯೂಕಾಸ್ ಕಾರ್ವಿ ಮತ್ತು ರೊನಾನ್ ಲ್ಯಾಬರ್ (ಫ್ರಾನ್ಸ್‌) ಅವರನ್ನು ಸಾತ್ವಿಕ್‌–ಚಿರಾಗ್‌ ಎದುರಿಸಬೇಕಾಗುತ್ತದೆ. ಡ್ರಾನಲ್ಲಿ ಜೋಡಿಗಳ ಸಂಖ್ಯೆಗೆ ಸಂಬಂಧಿಸಿ ಕ್ರೀಡಾ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದ ಕಾರಣ ಪುರುಷರ ಡಬಲ್ಸ್‌ ಡ್ರಾ ಪ್ರಕ್ರಿಯೆಯನ್ನು ಶುಕ್ರವಾರ ಮುಂದೂಡಲಾಗಿತ್ತು. ಕಾರ್ವಿ–ಲ್ಯಾಬರ್ ಜೋಡಿಯನ್ನು ಒಲಿಂಪಿಕ್ಸ್‌ಗೆ ಸೇರಿಸಿಕೊಳ್ಳಲು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆಗೆ ಶಿಫಾರಸು ಮಾಡಬೇಕು ಎಂದು ಕ್ರೀಡಾ ನ್ಯಾಯಮಂಡಳಿ (ಸಿಎಎಸ್‌) ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ಗೆ ಆದೇಶ ನೀಡಿತ್ತು. ಹೀಗಾಗಿ ಪುರುಷರ ಡಬಲ್ಸ್‌ ಡ್ರಾ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 16 ಜೋಡಿಗಳ ಬದಲಿಗೆ ಪರಿಷ್ಕೃತ 17 ಜೋಡಿ ಪುರುಷರ ಡಬಲ್ಸ್ ಡ್ರಾನಲ್ಲಿ ಫ್ರೆಂಚ್ ಜೋಡಿಯು ಸೇರ್ಪಡೆ ಸೇರ್ಪಡೆಗೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.