ಪ್ಯಾರಿಸ್‌ ಒಲಿಂಪಿಕ್ಸ್‌: ಸಿಂಧುಗೆ ಹ್ಯಾಟ್ರಿಕ್‌ ಪದಕದ ಛಲ ನವದೆಹಲಿ: ಹಿಂದಿನ ಎರಡು ಒಲಿಂಪಿಕ್ಸ್‌ಗಳಲ್ಲೂ ಪದಕಗಳನ್ನು ಗೆದ್ದಿರುವ ಭಾರತದ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿದ್ದು, ಈ ಬಾರಿ ಚಿನ್ನ ಗೆಲ್ಲುವ ಸರ್ವಪ್ರಯತ್ನದ ಛಲದಲ್ಲಿದ್ದಾರೆ. 29 ವರ್ಷದ ಸಿಂಧು ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ 2016ರ ರಿಯೋ ಕ್ರೀಡಾಕೂಟದಲ್ಲಿ ಬೆಳ್ಳಿ ಮತ್ತು 2020ರ ಟೋಕಿಯೊ ಕೂಟದಲ್ಲಿ ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಹಿಂದಿನ ಕೂಟಗಳ ಅನುಭವಗಳೊಂದಿಗೆ ಈ ಬಾರಿ ‘ಹ್ಯಾಟ್ರಿಕ್‌’ ಪದಕದ ಕನಸು ಕಾಣುತ್ತಿದ್ದಾರೆ. ‘ಪ್ಯಾರಿಸ್‌ನಲ್ಲಿ ಮೂರನೇ ಪದಕ ಗೆಲ್ಲುವುದು ನನ್ನ ಆದ್ಯತೆಯಾಗಿದೆ. ಅದರಲ್ಲೂ ಚಿನ್ನದ ಪದಕವನ್ನು ಗೆಲ್ಲಲು ಶೇ 200ರಷ್ಟು ಪ್ರಯತ್ನ ನಡೆಸುತ್ತೇನೆ. ಆದರೆ, ಅತಿಯಾದ ಆತ್ಮವಿಶ್ವಾಸ ಹೊಂದಲು ಬಯಸುವುದಿಲ್ಲ’ ಎಂದು ಜಿಯೊ ಸಿನಿಮಾದ ‘ದಿ ಡ್ರೀಮರ್ಸ್‌’ ವಿಶೇಷ ಸಂವಾದದಲ್ಲಿ ಅವರು ಹೇಳಿದ್ದಾರೆ. ‘ದೇಶವು ನನ್ನಿಂದ ಏನು ನಿರೀಕ್ಷೆ ಮಾಡುತ್ತಿದೆ ಎಂಬುದು ಗೊತ್ತಿದೆ. ಆದರೆ, ಒಲಿಂಪಿಕ್ಸ್‌ನಲ್ಲಿ ಸತತ ಮೂರು ಪದಕಗಳನ್ನು ಗೆಲ್ಲುವುದು ತಮಾಷೆಯಲ್ಲ. ಆದರೂ ನನ್ನ ಮನಸ್ಸು ಚಿನ್ನ ಗೆಲ್ಲುವತ್ತ ಕೇಂದ್ರೀಕೃತವಾಗಿದೆ. ಈ ನಿಟ್ಟಿನಲ್ಲೇ ಕಠಿಣ ತರಬೇತಿ, ಸಿದ್ಧತೆಗಳು ನಡೆಯುತ್ತಿವೆ’ ಎಂದಿದ್ದಾರೆ. ‘ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗಳು ಅತ್ಯಂತ ಕಠಿಣವಾಗಿರುತ್ತದೆ. ಅಗ್ರ 15ರೊಳಗಿನ ಆಟಗಾರ್ತಿಯರು ಒಂದೇ ಲಯದಲ್ಲಿ ಆಡುತ್ತಾರೆ. ಅಲ್ಲಿ ಅಂಕಗಳನ್ನು ಗಳಿಸುವುದು ಸುಲಭವಲ್ಲ. ಎದುರಾಳಿಯ ವಿರುದ್ಧ ಗಳಿಸುವ ಪ್ರತಿಯೊಂದು ಅಂಕಕ್ಕೂ ಕಠಿಣ ಹೋರಾಟ ನಡೆಸಬೇಕು. ಒಲಿಂಪಿಕ್ಸ್‌ನಲ್ಲಿ ಏನು ಬೇಕಾದರೂ ಆಗಬಹುದು. ಒಂದು ಸಣ್ಣ ತಪ್ಪು ಎಲ್ಲವನ್ನೂ ಬದಲಾಯಿಸಬಹುದು’ ಎಂದು ಹೇಳಿದರು. ಇದೇ ವೇಳೆ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಕುರಿತು ಮಾತನಾಡಿದ ಸಿಂಧು, ‘1980ರ ಆಲ್ ಇಂಗ್ಲೆಂಡ್ ಚಾಂಪಿಯನ್‌ ಜೊತೆಗೆ ಪ್ಯಾರಿಸ್‌ಗೆ ಪ್ರಯಾಣಿಸುತ್ತಿರುವುದು ನಮ್ಮ ಅದೃಷ್ಟ. ಅವರ ಮಾರ್ಗದರ್ಶನ ಮತ್ತು ಬೆಂಬಲವು ಪದಕ ಗೆಲ್ಲಲು ಸಹಾಯಕವಾಗಲಿದೆ’ ಎಂದು ಹೇಳಿದರು. ಪ್ರಕಾಶ್‌ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಭಾರತ ಬ್ಯಾಡ್ಮಿಂಟನ್‌ ತಂಡಕ್ಕೆ ಮೆಂಟರ್ ಆಗಿದ್ದಾರೆ. ‘ಪ್ರಕಾಶ್ (ಪಡುಕೋಣೆ) ಸರ್ ಮತ್ತು ಕೋಚ್‌ ಆಗಸ್ (ದ್ವಿ ಸಂಟೋಸೊ) ಅವರನ್ನು ಒಳಗೊಂಡ ಹೊಸ ತಂಡವನ್ನು ನಾವು ಹೊಂದಿದ್ದೇವೆ. ನಮ್ಮ ಅಭ್ಯಾಸವು ಪರಿಪೂರ್ಣವಾಗಿ ನಡೆದಿದ್ದು, ನಮ್ಮ ಗಮನವು ಗುರಿಯತ್ತ ಕೇಂದ್ರೀಕೃತವಾಗಿದೆ’ ಎಂದು ಸಿಂಧು ಹೇಳಿದರು. ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿರುವ ಸಿಂಧು, ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಸೇರಿದಂತೆ ದಾಖಲೆಯ ಐದು ಪದಕಗಳನ್ನು ಗೆದ್ದಿದ್ದಾರೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮೂರು ವೈಯಕ್ತಿಕ ಪದಕ ಮತ್ತು ತಂಡ ವಿಭಾಗದಲ್ಲಿ ಎರಡು ಪದಕ ಗೆದ್ದಿರುವ ಸಿಂಧು, ಏಷ್ಯನ್‌ ಕ್ರೀಡಾಕೂಟದಲ್ಲೂ ಎರಡು ಪದಕ ಜಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.