ಡೈಮಂಡ್‌ ಲೀಗ್‌: ಬೊಲ್ ದಾಖಲೆ ಲಂಡನ್: ವಿಶ್ವ ಚಾಂಪಿಯನ್‌ ಫೆಮ್ಕೆ ಬೊಲ್ ಅವರು ಡೈಮಂಡ್‌ ಲೀಗ್‌ ಕೂಟದ ಮಹಿಳೆಯರ 400 ಮೀ. ಓಟದಲ್ಲಿ ಶನಿವಾರ ನೂತನ ಕೂಟ ದಾಖಲೆ ಸ್ಥಾಪಿಸಿದರು. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮೊದಲು ಕೊನೆಯ ಸಿದ್ಧತೆಯಾಗಿ ನಡೆದ ಈ ಡೈಮಂಡ್‌ ಲೀಗ್‌ನಲ್ಲಿ, ಡಚ್‌ ಅಥ್ಲೀಟ್‌ ಬೊಲ್ 51.30 ಸೆಕೆಂಡುಗಳಲ್ಲಿ ಓಟ ಪೂರೈಸಿದರು. ಕಳೆದ ವರ್ಷ ಇದೇ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು 0.15 ಸೆಕೆಂಡುಗಳಿಂದ ಉತ್ತಮಪಡಿಸಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಅಲ್ಲಿ ವಿಶ್ವ ದಾಖಲೆ ವಿಜೇತೆ ಸಿಡ್ನಿ ಮೆಕ್‌ಲಾಘ್ಲಿನ್ ಚಿನ್ನ ಗೆದ್ದಿದ್ದರು. ಕಳೆದ ವಾರಾಂತ್ಯದಲ್ಲಿ ಸ್ವಿಜರ್ಲೆಂಡ್‌ನಲ್ಲಿ ನಡೆದ ಕೂಟದಲ್ಲಿ ಬೊಲ್ ಈ ಓಟವನ್ನು 51 ಸೆಕೆಂಡುಗಳ ಒಳಗೆ ಓಡಿದ ಎರಡನೇ ಓಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಅವರು 50.95 ಸೆ.ಗಳಲ್ಲಿ ಓಟ ಮುಗಿಸಿದ್ದು, ತಮ್ಮದೇ ಹೆಸರಿನಲ್ಲಿದ್ದ ಯುರೋಪಿಯನ್ ದಾಖಲೆಯನ್ನು (51.45) ಸುಧಾರಿಸಿದ್ದರು. ಲಂಡನ್‌ನಲ್ಲಿ ಅಮೆರಿಕದ ಶೇಮಿಯರ್‌ ಲಿಟ್ಲ್ (52.7 ಸೆ) ಎರಡನೇ ಸ್ಥಾನ ಪಡೆದರೆ, ಜಮೈಕಾದ ರಶೆಲ್‌ ಕ್ಲೇಟನ್ (53.24 ಸೆ.) ಮೂರನೇ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.