ಬ್ಯಾಸ್ಕೆಟ್‌ಬಾಲ್‌: ಮೌಂಟ್ಸ್‌ ಕ್ಲಬ್‌ ತಂಡಕ್ಕೆ ಗೆಲುವು ಬೆಂಗಳೂರು: ಪಾವನಿ (26), ನಿಲಯಾ (17) ಮತ್ತು ನಿಹಾರಿಕಾ (18) ಅವರ ಆಟದ ಬಲದಿಂದ ಮೌಂಟ್ಸ್‌ ಕ್ಲಬ್‌ ತಂಡವು ರಾಜ್ಯ ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಲೀಗ್‌ನ ಪಂದ್ಯದಲ್ಲಿ 84–65ರಿಂದ ಡಿವೈಇಎಸ್‌ ಮೈಸೂರು ತಂಡವನ್ನು ಮಣಿಸಿತು. ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮಧ್ಯಂತರದ ವೇಳೆ 41–30ರಿಂದ ಮುನ್ನಡೆ ಪಡೆದಿದ್ದ ಮೌಂಟ್ಸ್‌ ತಂಡವು ಉತ್ತರಾರ್ಧದಲ್ಲೂ ಪ್ರಾಬಲ್ಯ ಮೆರೆಯಿತು. ಡಿವೈಇಎಸ್‌ ಪರ ಯಶಸ್ವಿನಿ ಮತ್ತು ಸಾನಿಕಾ ಕ್ರಮವಾಗಿ 21 ಮತ್ತು 20 ಅಂಕ ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಬೀಗಲ್ಸ್‌ ಬಿ.ಸಿ. ತಂಡವು 65–49ರಿಂದ ಜೆಎಸ್‌ಸಿ ತಂಡವನ್ನು ಸೋಲಿಸಿತು. ಬೀಗಲ್ಸ್‌ ಪರ ಮೇಖಲಾ 23, ಚಂದನಾ 17 ಪಾಯಿಂಟ್ ಗಳಿಸಿದರು. ಜೆಎಸ್‌ಸಿ ತಂಡಕ್ಕೆ ಸಂಜನಾ 23 ಮತ್ತು ಆದ್ಯಾ 20 ಅಂಕ ತಂದಿತ್ತರು. ಸೋಮವಾರ ನಡೆಯುವ ಫೈನಲ್‌ ಲೀಗ್‌ನಲ್ಲಿ ಜೆಎಸ್‌ಸಿ ಮತ್ತು ಮೌಂಟ್ಸ್‌ ಕ್ಲಬ್‌ ತಂಡಗಳು (ಮಧ್ಯಾಹ್ನ 3.30) ಹಾಗೂ ಡಿವೈಇಎಸ್‌ ಮತ್ತು ಬೀಗಲ್ಸ್‌ ತಂಡಗಳು (ಸಂಜೆ 5.30) ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.