ಪ್ಯಾರಿಸ್ ಒಲಿಂಪಿಕ್‌: ಪುರುಷರ ಟ್ರಯಥ್ಲಾನ್‌ ಮುಂದೂಡಿಕೆ ಪ್ಯಾರಿಸ್‌: ಸೆನ್‌ ನದಿಯ ನೀರಿನ ಗುಣಮಟ್ಟದ ಬಗ್ಗೆ ಆತಂಕ ಮುಂದುವರಿದಿದ್ದು, ಮಂಗಳವಾರ ನಡೆಯಬೇಕಾಗಿದ್ದ ಪುರುಷರ ವಿಭಾಗದ ಟ್ರಯಥ್ಲಾನ್‌ ಸ್ಪರ್ಧೆಯನ್ನು ಮಂದೂಡಬೇಕಾಯಿತು. ಬುಧವಾರ ಈ ಸ್ಪರ್ಧೆಗಳನ್ನು ನಡೆಸಲು ಪ್ರಯತ್ನಿಸುವುದಾಗಿ ಆಯೋಜಕರು ಹೇಳಿದ್ದಾರೆ. ಮಹಿಳೆಯರ ವಿಭಾಗದ ಸ್ಪರ್ಧೆಯೂ ಬುಧವಾರ ನಿಗದಿಯಾಗಿದ್ದು, ನದಿಯ ನೀರು ಈಜಿಗೆ ಯೋಗ್ಯವಾದರಷ್ಟೇ ಸ್ಪರ್ಧೆ ಸಾಧ್ಯವಾಗಲಿದೆ. ಭಾನುವಾರ ಮತ್ತು ಸೋಮವಾರ ನಿಗದಿಯಾಗಿದ್ದ ಟ್ರಯಥ್ಲಾನ್‌ ಈಜು ವಿಭಾಗದ ಅಭ್ಯಾಸಕ್ಕೂ ಮಳೆಯಿಂದ ನದಿಯ ನೀರು ಕಲುಷಿತಗೊಂಡ ಕಾರಣ ಸಾಧ್ಯವಾಗಿರಲಿಲ್ಲ. ಸೆನ್‌ ನದಿಯನ್ನು ಒಲಿಂಪಿಕ್ಸ್‌ಗೆ ಬಳಸುವ ಉದ್ದೇಶದಿಂದ ಶುದ್ಧೀಕರಣಗೊಳಿಸಲು ಸ್ಥಳೀಯಾಡಳಿತ ಕೋಟಿಗಟ್ಟಲೆ ಯುರೊ ವೆಚ್ಚ ಮಾಡಿದೆ. ಆದರೆ ನದಿಯ ನೀರು ಮುಂದಿನ ದಿನಗಳಲ್ಲಿ ತಿಳಿಗೊಂಡು ಸ್ಪರ್ಧೆಯ ಈಜು ಹಂತಕ್ಕೆ ಸಿದ್ಧಗೊಳ್ಳಬಹುದೆಂದು ವಿಶ್ವಾಸದಲ್ಲಿ ಅಧಿಕಾರಿಗಳು ಇದ್ದಾರೆ. ಸ್ಪರ್ಧೆಯನ್ನು ಶುಕ್ರವಾರ ನಡೆಸುವ ಇನ್ನೊಂದು ಯೋಜನೆಯನ್ನೂ ಆಯೋಜಕರು ಹೊಂದಿದ್ದಾರೆ. ಆದರೆ ಮಂಗಳವಾರ ಜೋರಾದ ಗಾಳಿ ಬೀಸುವುದೆಂದು ಮತ್ತು ರಾತ್ರಿ ಮಳೆಯಾಗಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅದೇ ರೀತಿ ಆದಲ್ಲಿ ಪರಿಸ್ಥಿತಿ ಸಂಕೀರ್ಣಗೊಳ್ಳಬಹುದು. ಮಳೆಯಾದಲ್ಲಿ ಈ ನದಿಯಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ಏರುವುದು ಸಾಮಾನ್ಯ. ಒಲಿಂಪಿಕ್ ಉದ್ಘಾಟನೆಯ ದಿನ (ಶುಕ್ರವಾರ) ಭಾರಿ ಮಳೆಯಾಗಿತ್ತು. ಶನಿವಾರವೂ ಮಳೆಯಾಗಿತ್ತು. ಈ ಮಧ್ಯೆ ಮಂಗಳವಾರ ಪ್ಯಾರಿಸ್‌ನಲ್ಲಿ ತಾಪಮಾನ 35 ಡಿಗ್ರಿ ಸೆಲ್ಷಿಯಸ್‌ ಇದ್ದು, ಇದು ನದಿಯ ಕಲುಷಿತ ಮಟ್ಟ ಕಡಿಮೆ ಮಾಡಬಹುದೆಂಬ ಆಶಾವಾದ ತಲೆದೋರಿದೆ. ಪ್ಯಾರಿಸ್‌ನ ಹೃದಯಭಾಗದಲ್ಲಿ ಹರಿದುಹೋಗುವ ಈ ನದಿಯ ನೀರಿನ ಸ್ವಚ್ಛತೆಗಾಗಿ 1.4 ಶತಕೋಟಿ ಯುರೊ ($1.5 ಶತಕೋಟಿ) ವೆಚ್ಚ ಮಾಡಲಾಗಿದೆ. ಆದರೆ ನದಿಯಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ತಗ್ಗಿಸಲು ಹರಸಾಹಸಪಡಬೇಕಾಗಿದೆ. ‘ಕೆಲವು ಗಂಟೆಗಳಿಂದ ನದಿ ನೀರಿನ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಆಗಿದ್ದರೂ, ಟ್ರಯಥ್ಲಾನ್ ಮತ್ತು ಮ್ಯಾರಥಾನ್‌ ಈಜಿಗೆ ಗುರುತಿಸಲಾಗಿರುವ ಕೆಲವು ಭಾಗಗಳಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ನಿಗದಿಗಿಂತ ಹೆಚ್ಚು ಇದೆ’ ಎಂದು ಆಯೋಜಕರು ಹೇಳಿದ್ದಾರೆ. ‘ನಮ್ಮ ಆದ್ಯತೆ ಅಥ್ಲೀಟುಗಳ ಆರೋಗ್ಯ’ ಎಂದೂ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.