ಪ್ಯಾರಿಸ್‌ ಒಲಿಂಪಿಕ್ಸ್: ಪ್ರಿ ಕ್ವಾರ್ಟರ್‌ಗೆ ಮಣಿಕಾ ಬಾತ್ರಾ ಪ್ಯಾರಿಸ್‌: ಭಾರತದ ಟೇಬಲ್‌ ಟೆನಿಸ್ ತಾರೆ ಮಣಿಕಾ ಬಾತ್ರಾ ಅವರು ಒಲಿಂಪಿಕ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಈ ಮೂಲಕ ಸಿಂಗಲ್ಸ್‌ನಲ್ಲಿ 16ರ ಘಟ್ಟ ತಲುಪಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೋಮವಾರ ತಡರಾತ್ರಿ ನಡೆದ 32ರ ಘಟ್ಟದ ಪಂದ್ಯದಲ್ಲಿ 29 ವರ್ಷ ವಯಸ್ಸಿನ ಮಣಿಕಾ 11-9, 11-6, 11-9, 11-7ರಿಂದ ತವರಿನ ನೆಚ್ಚಿನ ಆಟಗಾರ್ತಿ ಪ್ರೀತಿಕಾ ಪಾವಡೆ ಅವರನ್ನು ಹಿಮ್ಮೆಟ್ಟಿಸಿದರು. ವಿಶ್ವ ಕ್ರಮಾಂಕದಲ್ಲಿ 28ನೇ ಸ್ಥಾನದಲ್ಲಿರುವ ಮಣಿಕಾ ಪಂದ್ಯದುದ್ದಕ್ಕೂ ಪಾಬಲ್ಯವನ್ನು ಸಾಧಿಸಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿರುವ ಎದುರಾಳಿ ಆಟಗಾರ್ತಿಗೆ ಒಂದೂ ಗೇಮನ್ನು ಬಿಟ್ಟುಕೊಡದೆ ಮುಂದಿನ ಸುತ್ತಿಗೆ ಮುನ್ನಡೆದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಣಿಕಾ 32ರ ಘಟ್ಟಕ್ಕೆ ತಲುಪಿದ್ದು, ಆ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಅವರು ಉತ್ತಮಗೊಳಿಸಿದರು. ‘ನನಗಿಂತ ಉನ್ನತ ಶ್ರೇಯಾಂಕದ ಫ್ರೆಂಚ್‌ ಆಟಗಾರ್ತಿಯನ್ನು ಸೋಲಿಸಿರುವುದಕ್ಕೆ ನಿಜಕ್ಕೂ ಖುಷಿಯಾಗಿದೆ. ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸುವ ಬಗ್ಗೆ ಯೋಚನೆ ಮಾಡಿರಲಿಲ್ಲ. ಇನ್ನೂ ಸಾಕಷ್ಟು ಸುತ್ತುಗಳು ಬಾಕಿ ಇವೆ. ಮುಂದಿನ ಪಂದ್ಯಗಳನ್ನು ಗೆಲ್ಲುವತ್ತ ಗಮನ ಕೇಂದ್ರೀಕರಿಸಿದ್ದೇನೆ’ ಎಂದು ಪಂದ್ಯದ ಬಳಿಕ ಮಣಿಕಾ ಪ್ರತಿಕ್ರಿಯಿಸಿದರು. ‘ನನ್ನ ಕೋಚ್‌ ಜೊತೆ ಚರ್ಚಿಸಿದಂತೆ ನಾನು ಎದುರಾಳಿ ಆಟಗಾರ್ತಿಯ ಫೋರ್‌ಹ್ಯಾಂಡ್‌ಗೆ ಆಡಲು ಯೋಜಿಸಿದ್ದೆ. ಆದರೆ, ಆಕೆಯ ಬ್ಯಾಕ್‌ಹ್ಯಾಂಡ್‌ನಲ್ಲಿ ನನಗೆ ಹೆಚ್ಚು ಅಂಕ ಲಭಿಸಿದ್ದರಿಂದ ಅದೇ ತಂತ್ರವನ್ನು ಪಂದ್ಯದುದ್ದಕ್ಕೂ ಮುಂದುವರಿಸಿದೆ’ ಎಂದು ಹೇಳಿದರು. 19 ವರ್ಷ ವಯಸ್ಸಿನ ಪ್ರೀತಿಕಾ ಹೆತ್ತವರು ಪುದುಚೇರಿ ಮೂಲದವರಾಗಿದ್ದು, 2003ರಲ್ಲಿ ಕುಟುಂಬವು ಪ್ಯಾರಿಸ್‌ಗೆ ಸ್ಥಳಾಂತರಗೊಂಡಿದೆ. ಎಡಗೈ ಆಟಗಾರ್ತಿಯಾಗಿರುವ ಪ್ರೀತಿಕಾ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದು, ಮೊದಲ ಸುತ್ತಿನಲ್ಲಿ ಹೊರಬಿದ್ದಿದ್ದರು. ಅವರು ಜೂನ್‌ನಲ್ಲಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಡಬ್ಲ್ಯುಟಿಟಿ ಫೈನಲ್‌ ತಲುಪಿದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಮತ್ತೊಬ್ಬ ಸ್ಪರ್ಧಿ ಶ್ರೀಜಾ ಅಕುಲಾ ಅವರು 32ರ ಘಟ್ಟದ ಪಂದ್ಯದಲ್ಲಿ ಸಿಂಗಪುರದ ಜಿಯಾನ್‌ ಝೆಂಗ್‌ ವಿರುದ್ಧ ಬುಧವಾರ ಸ್ಪರ್ಧಿಸುವರು. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನಕ್ಕೆ ಈಗಾಗಲೇ ತೆರೆಬಿದ್ದಿದೆ. ಶರತ್‌ ಕಮಲ್‌ ಮತ್ತು ಹರ್ಮೀತ್‌ ದೇಸಾಯಿ ಅವರು ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.