ಜೂನಿಯರ್‌ ಬ್ಯಾಡ್ಮಿಂಟನ್‌: ಬೋರ್ನಿಲ್‌ ಆಕಾಶ್‌ ಚಾಂಪಿಯನ್ ನವದೆಹಲಿ (ಪಿಟಿಐ): ಬೋರ್ನಿಲ್ ಆಕಾಶ್ ಚಂಗ್ಮಾಯಿ ಅವರು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನ 15 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಆದರೆ ತನ್ವಿ ಶರ್ಮಾ ಅವರು ಚೀನಾದ ಚೆಂಗ್ಡುವಿನಲ್ಲಿ ಭಾನುವಾರ ಕೊನೆಗೊಂಡ ಟೂರ್ನಿಯ 17 ವರ್ಷದೊಳಗಿನ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಎಡವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 21–17, 11–21, 21–19 ರಿಂದ ಗೆದ್ದ ಥಾಯ್ಲೆಂಡ್‌ನ ಯಾತವೀಮಿನ್ ಕೆತ್ಕಿಲಿಯೆಂಗ್‌ ಅವರು ಚಾಂಪಿಯನ್‌ ಆದರು. ತನ್ವಿ ಅವರು ಈ ಟೂರ್ನಿಯ ಪ್ರಶಸ್ತಿ ಸುತ್ತು ತಲುಪಿದ ಭಾರತದ ಎರಡನೇ ಆಟಗಾರ್ತಿ ಎನಿಸಿಕೊಂಡಿದ್ದರು. ಕಳೆದ ವರ್ಷ ಉನ್ನತಿ ಹೂಡಾ ಫೈನಲ್‌ ಪ್ರವೇಶಿಸಿದ್ದರಲ್ಲದೆ, ಬೆಳ್ಳಿ ಜಯಿಸಿದ್ದರು. ಬಾಲಕರ ವಿಭಾಗದ ಫೈನಲ್‌ನಲ್ಲಿ ಆಕಾಶ್ 21-19, 21-13 ರಿಂದ ಚೀನಾದ ಫಾನ್‌ ಹಾಂಗ್‌ ಕ್ಸುವಾನ್ ಅವರ ಸವಾಲನ್ನು ಬದಿಗೊತ್ತಿದರು. ಅಸ್ಸಾಂನ 13 ವರ್ಷದ ಆಕಾಶ್ ಕೇವಲ 34 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಸಿರಿಲ್‌ ವರ್ಮಾ ಅವರು 2013 ರಲ್ಲಿ ಇದೇ ವಯೋವರ್ಗದಲ್ಲಿ ಚಿನ್ನ ಗೆದ್ದಿದ್ದರು. ಆಕಾಶ್‌, ಈ ಸಾಧನೆ ಮಾಡಿದ ಎರಡನೇ ಆಟಗಾರ ಎನಿಸಿಕೊಂಡರು. ಟೂರ್ನಿಯುದ್ದಕ್ಕೂ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದ ಅವರು ಸೆಮಿಫೈನಲ್‌ನಲ್ಲಿ ಭಾರತದವರೇ ಆದ ಜಗಶೇರ್‌ ಸಿಂಗ್ ಖನ್ಗುರಾ ಅವರನ್ನು ಪರಾಭವಗೊಳಿಸಿದ್ದರು. ಆಕಾಶ್ ಅವರ ಸಾಧನೆಯು ಜೂನಿಯರ್‌ ವಿಭಾಗದಲ್ಲಿ ಭಾರತದ ಶಟ್ಲರ್‌ಗಳ ಗಮನಾರ್ಹ ಸಾಧನೆಗೆ ಮತ್ತೊಂದು ಸೇರ್ಪಡೆ ಎನಿಸಿದೆ. ಆಯುಷ್‌ ಶೆಟ್ಟಿ ಅವರು ಈ ತಿಂಗಳ ಆರಂಭದಲ್ಲಿ ಅಮೆರಿಕದಲ್ಲಿ ನಡೆದಿದ್ದ ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.