ಬಜರಂಗ್, ವಿನೇಶಾಗೆ ವಿದೇಶದಲ್ಲಿ ತರಬೇತಿ: ಕೇಂದ್ರ ಕ್ರೀಡಾ ಸಚಿವಾಲಯದಿಂದ ಅನುಮತಿ ನವದೆಹಲಿ: ಒಲಿಂಪಿಯನ್ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ವಿನೇಶಾ ಪೋಗಟ್ ಅವರು ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ ಸಿದ್ಧತೆಗಾಗಿ ವಿದೇಶದಲ್ಲಿ ತರಬೇತಿ ಪಡೆಯಲು ತೆರಳುವರು. ಈ ಕುರಿತು ಕುಸ್ತಿಪಟುಗಳು ಸಲ್ಲಿಸಿದ್ದ ಪ್ರಸ್ತಾವವನ್ನು ಕೇಂದ್ರ ಕ್ರೀಡಾ ಸಚಿವಾಲಯವು ಅನುಮೋದಿಸಿದೆ. ಬಜರಂಗ್ ಅವರು ಕಿರ್ಗಿಸ್ತಾನಕ್ಕೆ ಹಾಗೂ ವಿನೇಶಾ ಹಂಗರಿಗೆ ತೆರಳುವರು. ಜುಲೈ ಮೊದಲ ವಾರದಲ್ಲಿ ಪ್ರಯಾಣಿಸಲಿದ್ದಾರೆ. ಭಾರತ ಕುಸ್ತಿ ಫೆಡರೇಷನ್ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಶರ ಣ್ ಸಿಂಗ್ ಅವರ ಮೇಲೆ ಲೈಂಗಿಕ ಆರೋಪ ಮಾಡಿ ಪ್ರತಿಭಟನೆಗೆ ವಿನೇಶಾ ಮತ್ತು ಬಜರಂಗ್ ನೇತೃತ್ವ ವಹಿಸಿದ್ದರು. ಜೂನ್ 15ರೊಳಗೆ ಸಿಂಗ್ ಅವರನ್ನು ಬಂಧಿಸಬೇಕು ಇಲ್ಲದಿದ್ದರೆ ಮತ್ತೊಮ್ಮೆ ಬೀದಿಗಿಳಿದು ಪ್ರತಿಭಟಿಸುವುದಾಗಿ ಈಚೆಗೆ ಹೇಳಿದ್ದರು. ಆದರೆ ಇದೀಗ ಅವರು ವಿದೇಶಕ್ಕೆ ತೆರಳಲಿರುವುದರಿಂದ ಪ್ರತಿಭಟನೆ ನಡೆಯುವುದಿಲ್ಲವೆಂಬುದು ಬಹುತೇಕ ಖಚಿತ. ಬಜರಂಗ್ ಅವರು ಕಿರ್ಗಿಸ್ತಾನ ಇಸಾಯಕ್‌ ಕುಲ್‌ನಲ್ಲಿ 36 ದಿನಗಳ ಕಾಲ ತರಬೇತಿ ಪಡೆಯಲಿದ್ದಾರೆ. ವಿನೇಶಾ ಅವರು ಹಂಗರಿಯ ಬಿಷ್ಕೇಕ್‌ನಲ್ಲಿ ಒಂದು ವಾರ ಮತ್ತು ಟಾಟಾದಲ್ಲಿ 18 ದಿನಗಳ ಕಾಲ ತರಬೇತಿ ಪಡೆಯುವರು. ವಿನೇಶಾ ಅವರೊಂದಿಗೆ ಫಿಜಿಯೊಥೆರಪಿಸ್ಟ್ ಅಶ್ವಿನಿ ಜೀವನ್ ಪಾಟೀಲ, ಕೋಚ್ ಸುದೇಶ್ ಮತ್ತು ಸ್ಪಾರಿಂಗ್ ಪಾರ್ಟನರ್ ಆಗಿರುವ ಸಂಗೀತಾ ಫೋಗಟ್ (ಬಜರಂಗ್ ಅವರ ಪತ್ನಿ) ಕೂಡ ತೆರಳುವರು. ಬಜರಂಗ್ ಜೊತೆಗೆ ಫಿಜಿಯೊಥೆರಪಿಸ್ಟ್ ಅನುಜ್ ಗುಪ್ತಾ, ಕೋಚ್ ಸುಜೀತ್ ಮಾನ್, ಸಹ ಕುಸ್ತಿಪಟು ಜಿತೇಂದರ್ ಕಿನ್ಹಾ ಮತ್ತು ಸ್ಟ್ರೆಂಥ್, ಕಂಡಿಷನಿಂಗ್ ಪರಿಣತ ಖಾಜಿ ಹಸನ್ ತೆರಳುವರು. ಒಲಿಂಪಿಕ್ ಗೋಲ್ಡ್ ಕ್ವೆಸ್ಟ್‌ (ಒಜಿಕ್ಯೂ) ಲಾಭದ ಉದ್ದೇಶವಿಲ್ಲದ ಕ್ರೀಡಾ ಪ್ರೋತ್ಸಾಹ ಪ್ರತಿಷ್ಠಾನವು ಪಾಟೀಲ, ಗುಪ್ತಾ ಮತ್ತು ಹಸನ್ ಅವರ ವೆಚ್ಚಗಳನ್ನು ಭರಿಸಲಿದೆ. ಧರಣಿಯಲ್ಲಿ ಪಾಲ್ಗೊಂಡಿದ್ದ ಆರು ಕುಸ್ತಿಪಟುಗಳಿಗೆ ಆಯ್ಕೆ ಟ್ರಯಲ್ಸ್‌ನಲ್ಲಿ ಒಂದು ಬೌಟ್‌ನಲ್ಲಿ ಮಾತ್ರ ಭಾಗವಹಿಸಲು ಅವಕಾಶ ನೀಡುವುದಾಗಿ ಈ ಹಿಂದೆ ಭಾರತ ಒಲಿಂಪಿಕ್ ಸಂಸ್ಥೆಯಿಂದ ಡಬ್ಲ್ಯು ಎಫ್‌ಐಗೆ ನೇಮಕವಾಗಿರುವ ಅಡ್‌ಹಾಕ್ ಸಮಿತಿಯು ಹೇಳಿತ್ತು. ಇದರಿಂದಾಗಿ ಬೇರೆ ಕುಸ್ತಿಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಕುಸ್ತಿಪಟುಗಳ ವಿನಾಯಿತಿ: ಕೋಚ್‌ಗಳ ಅಸಮಾಧಾನ ನವದೆಹಲಿ (ಪಿಟಿಐ): ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಭಾರತ ಕುಸ್ತಿ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಆರು ಮಂದಿ ಕುಸ್ತಿಪಟುಗಳಿಗೆ ಸಿಂಗಲ್ ಬೌಟ್ ಅವಕಾಶ ನೀಡಿರುವುದಕ್ಕೆ ದೇಶದ ಪ್ರಮುಖ ತರಬೇತುದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರ ಬಂಧನಕ್ಕೆ ಆಗ್ರಹಿಸಿ ನಡೆದಿದ್ದ ಧರಣಿಯಲ್ಲಿ ಮುಂಚೂಣಿಯಲ್ಲಿದ್ದ ಆರು ಪ್ರಮುಖ ಕುಸ್ತಿಪಟುಗಳಿಗೆ ಈ ರಿಯಾಯಿತಿ ನೀಡಲಾಗಿದೆ. ಇದು ಬೇರೆ ಕುಸ್ತಿಪಟುಗಳು ಮತ್ತು ಕೋಚ್‌ಗಳಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ. ಮೀರಟ್‌ನಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಅಡ್‌ಹಾಕ್ ಸಮಿತಿಯ ಮುಖ್ಯಸ್ಥ ಭೂಪೆಂದರ್ ಸಿಂಗ್ ಬಜ್ವಾ ಅವರು ರಾಷ್ಟ್ರೀಯ ಫ್ರೀಸ್ಟೈಲ್ ಕೋಚ್ ಜಗಮಂದರ್ ಸಿಂಗ್ ಗ್ರಿಕೊ ರೋಮನ್ ಕೋಚ್ ಹರಗೋವಿಂದ್ ಸಿಂಗ್ ಮತ್ತು ಮಹಿಳಾ ತಂಡದ ಕೋಚ್ ವೀರೇಂದ್ರ ಸಿಂಗ್ ದಹಿಯಾ ಅವರೊಂದಿಗೆ ಚರ್ಚಿಸಿದರು. ’ಸಭೆಯಲ್ಲಿದ್ದ ಮೂವರು ಕೋಚ್‌ಗಳು ಬಜ್ವಾ ಅವರ ಮುಂದೆ ಆರು ಕುಸ್ತಿಪಟುಗಳಿಗೆ ನೀಡಿರುವ ವಿನಾಯಿತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಉದಯೋನ್ಮುಖ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ. ಅಖಾಡ ನಿರ್ವಹಿಸುವವರು ಮತ್ತು ಗಂಭೀರವಾಗಿ ಅಭ್ಯಾಸ ಮಾಡುವವರ ವಲಯದಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಇದೊಂದು ಪಕ್ಷಪಾತದ ನಿರ್ಧಾರವಾಗಿದೆಯೆಂದಿದ್ದಾರೆ‘ ಎಂದು ಐಒಎ ಮೂಲಗಳು ತಿಳಿಸಿವೆ. ’ಈ ವಿಷಯದ ಕುರಿತು ಸಮಿತಿಯು ಪರಿಶೀಲನೆ ನಡೆಸುವುದೆಂದು ಬಜ್ವಾ ಭರವಸೆ ನೀಡಿದ್ದಾರೆ‘ ಎಂದೂ ತಿಳಿಸಿದ್ದಾರೆ. ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ವಿನೇಶಾ ಫೋಗಟ್ ಬಜರಂಗ್ ಪೂನಿಯಾ ಸಾಕ್ಷಿ ಮಲಿಕ್ ಸತ್ಯವ್ರತ್ ಕಾದಿಯಾನ್ ಜಿತೇಂದರ್ ಕಿನ್ಹಾ ಮತ್ತು ಸಂಗೀತಾ ಫೋಗಟ್ ಅವರಿಗೆ ಈ ವಿನಾಯಿತಿ ನೀಡಲಾಗಿದೆ. ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಾಗಿ ಆಗಸ್ಟ್‌ನಲ್ಲಿ ನಲ್ಲಿ ಟ್ರಯಲ್ಸ್ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.