ತ್ರಿವೇಣಿ ಕಾಂಟಿನೆಂಟಲ್‌ ತಂಡಕ್ಕೆ ಗ್ಲೋಬಲ್ ಚೆಸ್‌ ಲೀಗ್ ಪ್ರಶಸ್ತಿ ದುಬೈ: ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್‌ ತಂಡ, ಭಾನುವಾರ ರಾತ್ರಿ ಮುಕ್ತಾಯಗೊಂಡ ಪ್ರಪ್ರಥಮ ಗ್ಲೋಬಲ್‌ ಚೆಸ್‌ ಲೀಗ್‌ನ ಚಾಂಪಿಯನ್‌ ಕಿರೀಟ ಧರಿಸಿಕೊಂಡಿತು. ‘ಸಡನ್‌ ಡೆತ್‌’ ಗೇಮ್‌ನಲ್ಲಿ ಡೆನ್ಮಾಕ್‌ನ ಗ್ರ್ಯಾಂಡ್‌ಮಾಸ್ಟರ್‌ ಯೋನಸ್‌ ಬ್ಯುಯೆರ ಅವರು ಅಪ್‌ಗ್ರಾಡ್‌ ಮುಂಬಾ ಮಾಸ್ಟರ್ಸ್ ಆಟಗಾರ ಜಾವೊಖಿರ್ ಸಿಂದರೋವ್ ಅವರನ್ನು ಸೋಲಿಸಿದ್ದು ತ್ರಿವೇಣಿ ತಂಡಕ್ಕೆ ನಿರ್ಣಾಯಕ ಗೆಲುವು ತಂದುಕೊಟ್ಟಿತು. ವಿಜೇತ ತಂಡವನ್ನು ನಿರ್ಧರಿಸಲು ಇದ್ದ ಎರಡು ಸುತ್ತುಗಳ ರ್‍ಯಾಪಿಡ್‌ ಪಂದ್ಯಗಳು ಮತ್ತು ಇನ್ನೆರಡು ಸುತ್ತುಗಳ ಬ್ಲಿಟ್ಸ್‌ ಹಣಾಹಣಿ ‘ಡ್ರಾ’ಗಳ ಮೂಲಕ ಸಮನಾದವು. ಹೀಗಾಗಿ ಅಂತಿಮವಾಗಿ ಸಡನ್‌ ಡೆತ್‌ ಸರಣಿ ಪಂದ್ಯಗಳ ಮೂಲಕ ವಿಜೇತ ತಂಡ ನಿರ್ಧರಿಸಬೇಕಾಯಿತು. ನಾಲ್ಕನೇ ಪಂದ್ಯದಲ್ಲಿ ನಿರ್ಣಾಯಕ ಫಲಿತಾಂಶ ಬಂತು. ಈ ಟೂರ್ನಿಯಲ್ಲಿ ಅತಿ ಕಡಿಮೆ ಅನುಭವ ಹೊಂದಿದ್ದ ಬ್ಯುಯೆರ ಅವರು ಅವಶ್ಯಕ ಸಂದರ್ಭದಲ್ಲೇ ಗೆಲುವು ಸಾಧಿಸಿದರು. ಈ ಮೊದಲು ಸಿಂಧರೋವ್ ವಿರುದ್ಧ ನಾಲ್ಕು ಪಂದ್ಯಗಳನ್ನು ಸೋತಿದ್ದ ಬ್ಯುಯರೆ, 17 ವರ್ಷದ ಉಜ್ಬೇಕ್ ಆಟಗಾರ ಸಿಂಧರೋವ್ ವಿರುದ್ಧ ಜಯಗಳಿಸಿದರು. ಆ ಮೂಲಕ ತಂಡಕ್ಕೆ ಮೊದಲ ಬಹುಮಾನ ಮೊತ್ತವಾದ ₹ 4 ಕೋಟಿ ಪಡೆಯಲು ನೆರವಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.