ಸೀನಿಯರ್‌ ಈಜು ಚಾಂಪಿಯನ್‌ಷಿಪ್‌: ಕರ್ನಾಟಕಕ್ಕೆ ಮತ್ತೆ 5 ಚಿನ್ನ ಬೆಂಗಳೂರು: ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಸ್ಪರ್ಧಿಗಳ ಪಾರಮ್ಯ ಮುಂದುವರಿದಿದ್ದು, ಹಷಿಕಾ ರಾಮಚಂದ್ರ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು. ಹೈದರಾಬಾದ್‌ನ ಗಚ್ಚಿಬೌಲಿ ಕ್ರೀಡಾಂಗಣದ ಈಜುಕೊಳದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಕರ್ನಾಟಕದ ಈಜುಪಟುಗಳು ಸೋಮವಾರ ಐದು ಚಿನ್ನದ ಪದಕ ಜಯಿಸಿದರು. ಮಹಿಳೆಯರ 200 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ಹಷಿಕಾ 2 ನಿ. 21.15 ಸೆ.ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ರಿಚಾ ಮಿಶ್ರಾ (2 ನಿ. 23.62 ಸೆ.) ಅವರು 2010 ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು ಅವರು ಮುರಿದರು. ಹಷಿಕಾ ಅವರಿಗೆ ಪ್ರಬಲ ಪೈಪೋಟಿ ನೀಡಿದ ಮಹಾರಾಷ್ಟ್ರದ ಅಪೇಕ್ಷಾ ಫೆರ್ನಾಂಡಿಸ್‌ ಎರಡನೇ ಸ್ಥಾನ ಗಳಿಸಿದರು. ಪುರುಷರ 200 ಮೀ. ಮೆಡ್ಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಕರ್ನಾಟದ ಪಾಲಾಯಿತು. ಎಸ್‌.ಶಿವ (2 ನಿ.6.08 ಸೆ.) ಅಗ್ರಸ್ಥಾನ ಪಡೆದರೆ, ಶೋಯನ್‌ ಗಂಗೂಲಿ (2 ನಿ. 7.71 ಸೆ.) ಎರಡನೇ ಸ್ಥಾನ ಗಳಿಸಿದರು. ಪುರುಷರ 100 ಮೀ. ಫ್ರೀಸ್ಟೈಲ್‌ನಲ್ಲಿ ತನಿಷ್‌ ಜಾರ್ಜ್‌ ಮ್ಯಾಥ್ಯೂ 50.90 ಸೆ.ಗಳೊಂದಿಗೆ ಅಗ್ರಸ್ಥಾನ ಪಡೆದರು. ಎಸ್ಎಸ್‌ಸಿಬಿಯ ಆನಂದ್‌ (51.09 ಸೆ.) ಮತ್ತು ದೆಹಲಿಯ ವಿಶಾಲ್‌ ಗ್ರೆವಾಲ್‌ ಅವರನ್ನು ಹಿಂದಿಕ್ಕುವಲ್ಲಿ ತನಿಷ್‌ ಯಶಸ್ವಿಯಾದರು. ಮಹಿಳೆಯರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 33.25 ಸೆ.ಗಳೊಂದಿಗೆ ಮಾನವಿ ವರ್ಮಾ ಚಿನ್ನ ಗೆದ್ದರೆ, ಎ.ಕೆ.ಲಿನೇಶಾ (33.86 ಸೆ.) ಅವರು ಎರಡನೆಯವರಾದರು. ಲಿನೇಶಾ ಅವರು ಭಾನುವಾರ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು. ಕರ್ನಾಟಕದ ಮತ್ತೊಂದು ಚಿನ್ನ 4X100 ಮೀ. ಫ್ರೀಸ್ಟೈಲ್‌ ಮಿಕ್ಸಡ್‌ ರಿಲೇ ಸ್ಪರ್ಧೆಯಲ್ಲಿ ಬಂತು. ತನಿಷ್‌ ಜಾರ್ಜ್‌, ಶಾಲಿನಿ ಆರ್‌.ದೀಕ್ಷಿತ್‌, ನೀನಾ ವೆಂಕಟೇಶ್‌ ಮತ್ತು ಅನೀಶ್‌ ಎಸ್‌.ಗೌಡ ಅವರನ್ನೊಳಗೊಂಡ ತಂಡ 3 ನಿ. 42.92 ಸೆ.ಗಳಲ್ಲಿ ಗುರಿ ತಲುಪಿತು. ಬೆಳ್ಳಿ ಹಾಗೂ ಕಂಚು ಕ್ರಮವಾಗಿ ಆರ್‌ಎಸ್‌ಪಿಬಿ ಮತ್ತು ಮಹಾರಾಷ್ಟ್ರ ತಂಡಗಳ ಪಾಲಾದವು. ಪುರುಷರ 800 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಅನೀಶ್‌ ಎಸ್‌.ಗೌಡ 8 ನಿ.16.92 ಸೆ.ಗಳೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡರು. 100 ಮೀ. ಫ್ರೀಸ್ಟೈಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು, ಕಂಚಿನ ಪದಕವನ್ನು ಅಲ್ಪ ಅಂತರದಲ್ಲಿ ಕಳೆದುಕೊಂಡರು. ಮಹಿಳೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಧೀನಿಧಿ ದೇಸಿಂಗು ಮೂರನೇ ಸ್ಥಾನ ಪಡೆದರು. ಅವರು ಸ್ಪರ್ಧೆ ಕೊನೆಗೊಳಿಸಲು 58.07 ಸೆ.ಗಳನ್ನು ತೆಗೆದುಕೊಂಡರು. ಪುರುಷರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಡಿ.ಎಸ್‌.ಪೃಥ್ವಿಕ್‌ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.