ಚೆಸ್‌: ಕಾರ್ಲ್‌ಸನ್‌ಗೆ ಮಣಿದ ಆನಂದ್ ಜಗ್ರೆಬ್ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರಿಗೆ ಸೂಪರ್ ಯುನೈಟೆಡ್‌ ರ್‍ಯಾಪಿಡ್‌ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯ ಎರಡನೇ ದಿನ ಮಿಶ್ರ ಫಲ ದೊರೆಯಿತು. ಮೂರು ಪಂದ್ಯಗಳಲ್ಲಿ ಕ್ರಮವಾಗಿ ಗೆಲುವು, ಡ್ರಾ ಮತ್ತು ಸೋಲು ಎದುರಾಯಿತು. ಮೊದಲ ಪಂದ್ಯದಲ್ಲಿ ಇವಾನ್‌ ಶಾರಿಚ್‌ ಅವರನ್ನು ಮಣಿಸಿದ ಆನಂದ್‌, ಫ್ಯಾಬಿಯಾನೊ ಕರುವಾನ ಜತೆ ಡ್ರಾ ಮಾಡಿಕೊಂಡರು. ಆದರೆ ಮೂರನೇ ಪಂದ್ಯದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಎದುರು ಸೋತರು. ಡಿ.ಗುಕೇಶ್‌ ಅವರು ಎರಡು ಗೆಲುವು ಮತ್ತು ಒಂದು ಡ್ರಾದೊಂದಿಗೆ ಜಂಟಿ ಎರಡನೇ ಸ್ಥಾನಕ್ಕೇರಿದರು. ಕಾನ್‌ಸ್ಟಾಂಟಿನ್ ಲುಪುಲೆಸ್ಕು ಮತ್ತು ಶಾರಿಚ್‌ ಅವರನ್ನು ಮಣಿಸಿದ ಗುಕೇಶ್, ರಿಚರ್ಡ್‌ ರಾಪೋರ್ಟ್‌ ಅವರೊಂದಿಗೆ ಪಾಯಿಂಟ್‌ ಹಂಚಿಕೊಂಡರು. ಕಾರ್ಲ್‌ಸನ್‌ ಅವರು ಮೊದಲ ಎರಡು ಪಂದ್ಯಗಳಲ್ಲಿ ಕರುವಾನ ಮತ್ತು ಅಲಿರೆಜಾ ಎದುರು ಸೋತಿದ್ದರು. ಆದರೆ ಆನಂದ್‌ ಎದುರು ಲಯ ಕಂಡುಕೊಂಡರು. ಸ್ಪರ್ಧೆಯ ಎರಡನೇ ದಿನದ ಅಂತ್ಯಕ್ಕೆ (ಆರು ಪಂದ್ಯಗಳು) ಆನಂದ್‌, ಇಯಾನ್‌ ನೆಪೊಮ್‌ನಿಷಿ ಮತ್ತು ಕರುವಾನ ಅವರು ತಲಾ ಎಂಟು ಪಾಯಿಂಟ್ಸ್‌ಗಳೊಂದಿಗೆ ಜಂಟಿ ಅಗ್ರಸ್ಥಾನಲ್ಲಿದ್ದಾರೆ. ಗುಕೇಶ್‌ ಮತ್ತು ಪೋಲೆಂಡ್‌ನ ಯಾನ್‌ ಕ್ರಿಸ್ಟೋಫ್‌ ದೂಡಾ ಅವರು ಏಳು ಪಾಯಿಂಟ್ಸ್‌ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಆನಂದ್‌ ಅವರು ಮೊದಲ ದಿನ ಎರಡು ಪಂದ್ಯಗಳನ್ನು ಗೆದ್ದು ಒಂದನ್ನು ಡ್ರಾ ಮಾಡಿಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.