ಜಮಾರಿಗೆ ಬೆಂಗಳೂರು ಡರ್ಬಿ ಗೌರವ ರವಿಕುಮಾರ್ ಬೆಂಗಳೂರು: ಪೆಸಿ ಶ್ರಾಫ್ ತರಬೇತು ನೀಡಿರುವ ಹಾಗೂ ಸಿ.ಉಮೇಶ್ ಸವಾರಿಯಲ್ಲಿದ್ದ ‘ಜಮಾರಿ’ ಕುದುರೆಯು ಭಾನುವಾರ ನಡೆದ ‘ಬೆಟ್‍ವೇ ಬೆಂಗಳೂರು ಬೇಸಿಗೆ ಡರ್ಬಿ’ ಗೆದ್ದುಕೊಂಡಿತು. ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ನಡೆದ ಪ್ರತಿಷ್ಠಿತ ಡರ್ಬಿ, ರೇಸ್‌ಪ್ರಿಯರಿಗೆ ಸಾಕಷ್ಟು ರಸದೌತಣ ಉಣಬಡಿಸಿತು. ಡರ್ಬಿ ದಿನದಲ್ಲಿ ನಡೆದ ಎಲ್ಲ ಎಂಟು ರೇಸ್‌ಗಳನ್ನೂ ನೋಡಿ ಸಂಭ್ರಮಿಸಿದರು. ಹನ್ನೊಂದು ಸ್ಪರ್ಧಿಗಳಿದ್ದ ಕಣದ ಬೆಟ್ಟಿಂಗ್‌ನಲ್ಲಿ ಸಿಂಥೆಸಿಸ್ ‘ಫೇವರಿಟ್‍’ ಆಗಿತ್ತು. ಆದರೆ ಜಮಾರಿ ನಿರಾಯಾಸ ಗೆಲುವಿನೊಂದಿಗೆ ಅಚ್ಚರಿಮೂಡಿಸಿತು. 2000 ಮೀ. ದೂರದ ಡರ್ಬಿಗೆ ಚಾಲನೆ ದೊರೆತ ಕೂಡಲೇ ಜಮಾರಿ ಮುನ್ನುಗ್ಗಿ ಲೀಡ್ ಪಡೆಯಿತು. ಕೆಲ ಮೀಟರ್ಸ್ ದಾಟಿದ ನಂತರ ‘ಚಾಂಪಿಯನ್ಸ್ ವೇ’ ಮುನ್ನಡೆ ಸಾಧಿಸಿತು. ಆದರೆ ಆತುರ ತೋರದೆ ಉಮೇಶ್ ಅವರು ಜಮಾರಿ, ಎರಡನೇ ಸ್ಥಾನದಲ್ಲೇ ಇರುವಂತೆ ನೋಡಿಕೊಂಡರು. ರೇಸ್‌ 1,500 ಮೀ. ಕ್ರಮಿಸುವವರೆಗೂ ಚಾಂಪಿಯನ್ಸ್‌ ವೇ ಸ್ಪಷ್ಟ ಮುನ್ನಡೆಯಲ್ಲಿದ್ದರೆ, ಜಮಾರಿ ಎರಡನೇ ಸ್ಥಾನದಲ್ಲಿತ್ತು. ಆದರೆ ಕೊನೆಯ 500 ಮೀಟರ್ಸ್‌ ಇರುವಂತೆಯೇ, ಜಮಾರಿ ವೇಗವಾಗಿ ಮುನ್ನುಗ್ಗಿ ಮತ್ತೆ ಲೀಡ್‌ ಪಡೆಯಿತು. ಸಿಂಥೆಸಿಸ್ ಮತ್ತು ಡೆಸ್ಟ್ರಾಯರ್ ಕುದುರೆಗಳು ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದವು. ಕೊನೆಯ 400ಮೀ.ಗಳ ನೇರ ಓಟದಲ್ಲಿ ಜಮಾರಿ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಾ ಮುನ್ನುಗ್ಗಿತು. ಎದುರಾಳಿಗಳನ್ನು ಏಳು ಲೆಂಗ್ತ್‌ಗಳ ಅಂತರದಲ್ಲಿ ಸೋಲಿಸಿ ಬೇಸಿಗೆ ರೇಸ್‍ಗಳ ಶ್ರೀಮಂತ ಡರ್ಬಿಯನ್ನು ತನ್ನದಾಗಿಸಿಕೊಂಡಿತು. ಕೊನೆಯ 200 ಮೀಟರ್ಸ್‌ ಇದ್ದಾಗ ಹಿಂದಿನಿಂದ ರಭಸವಾಗಿ ಓಡಿ ಬಂದ, ಜಾಕಿ ಅಂಗದ್‌ ಅವರು ಸವಾರಿಯಲ್ಲಿದ್ದ ಆಸ್ಪೀಶಿಯಸ್ ಕ್ವೀನ್ ಎರಡನೇ ಸ್ಥಾನ ಪಡೆಯಿತು. ಇಮ್ರಾನ್‌ ಚಿಸ್ಟಿ ಸವಾರಿಯಲ್ಲಿದ್ದ ಡೆಸ್ಟ್ರಾಯರ್‌ ಮತ್ತು ಸೂರಜ್‌ ನರೇಡು ಸವಾರಿಯಲ್ಲಿದ್ದ ಸಿಂಥೆಸಿಸ್‌ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡವು. ಸೂರಜ್‌ ಸವಾರಿ ಮಾಡಿದ್ದರಿಂದ ಸಿಂಥೆಸಿಸ್‌, ಡರ್ಬಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿತ್ತು. 2,000 ಮೀ. ದೂರವನ್ನು ಜಮಾರಿ 2 ನಿಮಿಷ 9.58 ಸೆ.ಗಳಲ್ಲಿ ಕ್ರಮಿಸಿತು. ಈ ಗೆಲುವಿನೊಂದಿಗೆ ತನ್ನ ಮಾಲೀಕರಿಗೆ ₹ 3 ಲಕ್ಷ ಮೌಲ್ಯದ ಟ್ರೋಫಿ ಹಾಗೂ ₹ 98.01 ಲಕ್ಷ ನಗದು ಬಹುಮಾನ ದೊರಕಿಸಿಕೊಟ್ಟಿತು. ಡರ್ಬಿ ವೀಕ್ಷಿಸಲು ರೇಸ್‌ಪ್ರಿಯರು ಮತ್ತು ಪಂಟರ್‌ಗಳು ಸೇರಿದಂತೆ 7,500ಕ್ಕೂ ಅಧಿಕ ಮಂದಿ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ನೆರೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.