ಮಂಗಳೂರಿನ ಚೆಸ್‌ ಆಟಗಾರ ಶರಣ್‌ಗೆ ಇಂಟರ್‌ನ್ಯಾಷನಲ್ ಮಾಸ್ಟರ್ ಪಟ್ಟ ಮಂಗಳೂರು: ನಗರದ ಚೆಸ್ ಆಟಗಾರ ಶರಣ್ ರಾವ್ ಇಂಟರ್‌ನ್ಯಾಷನಲ್ ಮಾಸ್ಟರ್ (ಐಎಂ) ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. ಆಸ್ಟ್ರಿಯಾದಲ್ಲಿ ಜುಲೈ 15ರಂದು ಮುಕ್ತಾಯಗೊಂಡ ಸೇಂಟ್ ವೇಟ್ ಜಾಕ್ಸ್ ಲೇಮಾನ್ಸ್ ಓಪನ್‌ ಟೂರ್ನಿಯಲ್ಲಿ ಅವರು ಈ ಸಾಧನೆ ಮಾಡಿದರು. ಯುರೋಪ್ ಪ್ರವಾಸದಲ್ಲಿರುವ ಅವರು ಜೆಕ್ ಗಣರಾಜ್ಯದ ಪ್ರಾಗ್‌ನಲ್ಲಿ ನಡೆದ ಟೂರ್ನಿಯಲ್ಲಿ ಐಎಂ ಪಟ್ಟದ ಮೂರನೇ ನಾರ್ಮ್ ಗಳಿಸಿದ್ದರು. ಅವರು ಐಎಂ ಪಟ್ಟ ಪಡೆದ ಕರ್ನಾಟಕದ ಹತ್ತನೇ ಆಟಗಾರ. ಒಂಬತ್ತು ಸುತ್ತುಗಳ ಸೇಂಟ್ ವೇಟ್ ಜಾಕ್ಸ್ ಲೇಮಾನ್ಸ್ ಓಪನ್‌ ಟೂರ್ನಿಯಲ್ಲಿ 7.5 ಪಾಯಿಂಟ್ ಕಲೆ ಹಾಕಿದ್ದ ಶರಣ್‌ ಎರಡನೇ ಸ್ಥಾನ ಪಡೆದಿದ್ದಾರೆ. ಅಂತಿಮ ಸುತ್ತಿನಲ್ಲಿ ಜರ್ಮನಿಯ ಸೆಬಾಸ್ಟಿಯನ್ ಹಫ್‌ಮ್ಯಾನ್ ವಿರುದ್ಧ ಜಯ ಸಾಧಿಸುವುದರೊಂದಿಗೆ ರೇಟಿಂಗ್‌ನಲ್ಲಿ 2400ರ ಗಡಿ ದಾಟಿದರು. ಇಲ್ಲಿನ ಲಾಲ್‌ಬಾಗ್ ನಿವಾಸಿಗಳಾದ ಶುಭಾನಂದ ರಾವ್ ಮತ್ತು ಜ್ಯೋತಿ ರಾವ್ ಅವರ ಪುತ್ರ ಶರಣ್ ಇಂಟರ್‌ನ್ಯಾಷನಲ್ ಮಾಸ್ಟರ್‌ ಪಟ್ಟದ ಮೊದಲ ನಾರ್ಮ್ ಗಳಿಸಿದ್ದು 2021ರಲ್ಲಿ. ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ಸನ್‌ವೇ ಸಿಟ್ಜಸ್‌ ಚೆಸ್ ಫೆಸ್ಟಿವಲ್‌ನಲ್ಲಿ ಈ ಸಾಧನೆ ಮಾಡಿದ ಅವರು ಕಳೆದ ವರ್ಷ ನಡೆದ ಮಹಾರಾಷ್ಟ್ರ ಓಪನ್ ಟೂರ್ನಿಯಲ್ಲಿ ಎರಡನೇ ನಾರ್ಮ್ ಗಳಿಸಿದ್ದರು. ಜುಲೈ ಮೊದಲ ವಾರದಲ್ಲಿ 2255 ಎಲೊ ರೇಟಿಂಗ್ ಹೊಂದಿದ್ದ ಶರಣ್ ಜೆಕ್ ಗಣರಾಜ್ಯದ ಪ್ರಾಗ್‌ ಟೂರ್ನಿಯಲ್ಲಿ 69.6 ಪಾಯಿಂಟ್‌ಗಳ ಸಾಧನೆ ಮಾಡಿದರು. ನಂತರ ಬಲ್ಗೇರಿಯಾದಲ್ಲಿ 40.2 ಮತ್ತು ಆಸ್ಟ್ರಿಯಾದಲ್ಲಿ 37 ಪಾಯಿಂಟ್ ಕಲೆ ಹಾಕುವ ಮೂಲಕ ಒಟ್ಟು ಪಾಯಿಂಟ್‌ಗಳನ್ನು 2401.8ಕ್ಕೇರಿಸಿಕೊಂಡರು. ಈ ನಡುವೆ ಸ್ಲೊವಾಕಿಯಾದಲ್ಲಿ ನಡೆದ ಟೂರ್ನಿಯಲ್ಲೂ ಅವರು ಪ್ರಶಸ್ತಿ ಗೆದ್ದುಕೊಂಡಿದ್ದರು. ‘2021ರಲ್ಲಿ ಮೊದಲ ನಾರ್ಮ್ ಗಳಿಸಿದಾಗ ಮುಂದಿನ ಹಾದಿಯ ಬಗ್ಗೆ ಸ್ಪಷ್ಟ ಗುರಿ ಇರಲಿಲ್ಲ. ನಂತರ, ಎಲ್ಲವೂ ಸ್ಪಷ್ಟವಾಗುತ್ತಿದ್ದಂತೆ ಇಂಟರ್‌ನ್ಯಾಷನಲ್ ಮಾಸ್ಟರ್ ಆಗಬೇಕೆಂಬ ಛಲ ಉಂಟಾಯಿತು. ಮುಂದಿನ ಎರಡು ನಾರ್ಮ್‌ಗಳನ್ನು ಗಳಿಸಲು ಸುದೀರ್ಘ ಎರಡು ವರ್ಷಗಳು ಹಿಡಿದವು. ಈ ಬಾರಿಯ ಯುರೋಪ್ ಪ್ರವಾಸದಲ್ಲಿ ಪ್ರಶಸ್ತಿಗಳನ್ನು ಗೆಲ್ಲಲು ಮತ್ತು ಪಂದ್ಯಗಳಲ್ಲಿ ಸೋಲದೇ ಇರಲು ಗಮನಹರಿಸಿದ್ದೆ. ಅದು ಕೈ ಹಿಡಿಯಿತು. ಕೊನೆಗೂ ಇಂಟರ್‌ನ್ಯಾಷನಲ್ ಮಾಸ್ಟರ್ ಆಗಿರುವುದು ಖುಷಿ ತಂದಿದೆ’ ಎಂದು ಶರಣ್ ಅಭಿಪ್ರಾಯಪಟ್ಟಿದ್ದಾರೆ. 2013ರ ವರೆಗೆ ನಗರದ ಡೆರಿಕ್ಸ್‌ ಚೆಸ್ ಸ್ಕೂಲ್‌ನಲ್ಲಿ ಪ್ರಸನ್ನ ರಾವ್ ಮತ್ತು ಡೆರಿಕ್ ಪಿಂಟೊ ಅವರ ಬಳಿ ಚೆಸ್ ಕಲಿತ ಶರಣ್ 2014ರಲ್ಲಿ ಅರವಿಂದ ಶಾಸ್ತ್ರಿ ಅವರ ಶಿಷ್ಯರಾದರು. ನಂತರ 2018ರ ವರೆಗೆ ಹೆಚ್ಚಿನ ಗಮನ ಕಲಿಕೆಯ ಕಡೆಗೆ ಸಾಗಿತು. ಹೀಗಾಗಿ ಚೆಸ್‌ನಿಂದ ಸ್ವಲ್ಪ ದೂರವೇ ಉಳಿದಿದ್ದರು. ಸುರತ್ಕಲ್‌ ಎನ್‌ಐಟಿಕೆಯಲ್ಲಿ ಎಂಜಿನಿಯರಿಂಗ್ ಕಲಿತ ಅವರು ಸದ್ಯ ರಾವ್ಸ್‌ ಚೆಸ್ ಕಾರ್ನರ್ ಎಂಬ ಸ್ವಂತ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.