ಕುಸ್ತಿ ಫೆಡರೇಷನ್‌ನ ಚುನಾವಣೆ ಮತ್ತಷ್ಟು ಮುಂದಕ್ಕೆ ಗುವಾಹಟಿ: ಭಾರತ ಕುಸ್ತಿ ಫೆಡರೇಷನ್‌ನ ಚುನಾವಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೋರಿ ಅಸ್ಸಾಂ ಕುಸ್ತಿ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುವಾಹಟಿ ಹೈಕೋರ್ಟ್‌ ಜುಲೈ 28ಕ್ಕೆ ಮುಂದೂಡಿದೆ. ಹೀಗಾಗಿ ಫೆಡರೇಷನ್‌ನ ಚುನಾವಣೆ ದಿನಾಂಕ ಇನ್ನಷ್ಟು ಮುಂದಕ್ಕೆ ಹೋಗಲಿದೆ. ಜುಲೈ 11ರಂದು ಈ ಚುನಾವಣೆ ನಡೆಸಬೇಕಾಗಿತ್ತು. ಆದರೆ ಅಸ್ಸಾಂ ಸಂಸ್ಥೆಯ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣೆಗೆ ಪ್ರಕ್ರಿಯೆಗೆ ತಡೆ ನೀಡಲಾಗಿತ್ತು. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ ಮುಂದೂಡಿದೆ ಎಂದು ಕುಸ್ತಿ ಸಂಸ್ಥೆಯ ವಕೀಲ ದೇವಜಿತ್‌ ಸೈಕಿಯಾ ತಿಳಿಸಿದರು. ಅಡ್‌ಹಾಕ್‌ ಸಮಿತಿ ಪರ ವಕೀಲರು ಹಾಜರಿರಲಿಲ್ಲ. ಆದರೆ ಪ್ರತಿವಾದಿಗಳಲ್ಲಿ ಒಬ್ಬರಾದ ಕ್ರೀಡಾ ಸಚಿವಾಲಯದ ಪ್ರತಿನಿಧಿ, ತಮ್ಮ ಪ್ರಮಾಣಪತ್ರ ಸಲ್ಲಿಸಲು ಒಂದು ವಾರ ಕೇಳಿದರು. ನ್ಯಾಯಾಲಯವು, 26ರೊಳಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.