ವಿಶ್ವ ಜೂನಿಯರ್ ಶೂಟಿಂಗ್‌: ಭಾರತಕ್ಕೆ ಮತ್ತೊಂದು ಚಿನ್ನ ನವದೆಹಲಿ: ಭಾರತದ ಅಭಿನವ್ ಶಾ ಮತ್ತು ಗೌತಮಿ ಭಾನೋಟ್‌ ಜೋಡಿ, ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವ ಜೂನಿಯರ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಸೋಮವಾರ 10 ಮೀ. ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಚಿನ್ನದ ಪದಕದ ಸ್ಪರ್ಧೆಯಲ್ಲಿ ಭಾರತದ ಜೋಡಿ 17–13 ಅಂತರದಿಂದ ಫ್ರಾನ್ಸ್‌ನ ಒಷಾನೆ ಮುಲ್ಲರ್ ಮತ್ತು ರೊಮೇನ್‌ ಅಫ್ರೀರ್ ಜೋಡಿಯನ್ನು ಸೋಲಿಸಿತು. ಇದು ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನ. ಒಟ್ಟು ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಡನೆ ಭಾರತ ಎರಡನೇ ಸ್ಥಾನದಲ್ಲಿದೆ. ಹೆಚ್ಚುವರಿಯಾಗಿ ಒಂದು ಬೆಳ್ಳಿ ಗೆದ್ದಿರುವ ಚೀನಾ ಅಗ್ರಸ್ಥಾನಲ್ಲಿದೆ. ಎರಡನೇ ದಿನ ಭಾರತ 10 ಮೀ. ಏರ್‌ ಪಿಸ್ತೂಲ್‌ ಮಿಕ್ಸೆಡ್‌ ತಂಡ ವಿಭಾಗದಲ್ಲಿ ಕಂಚಿನ ಪದಕ ಗಳಿಸಿತು. ಅಭಿನವ್ ಚೌಧರಿ– ಸೈನ್ಯಾಮ್ ಅವರು ಕಂಚಿನ ಪದಕಕ್ಕೆ ನಡೆದ ಸ್ಪರ್ಧೆಯಲ್ಲಿ 17–11 ರಿಂದ ಕೊರಿಯಾದ ಕಿಮ್‌ ಜುರಿ– ಕಿಮ್‌ ಕಂಗ್ಯುನ್ ತಂಡದ ಮೇಲೆ ಜಯಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.