ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಇಂದಿನಿಂದ: ಸಿಂಧು, ಶ್ರೀಕಾಂತ್‌ ಮೇಲೆ ನಿರೀಕ್ಷೆ ಯೋಸು. ಕೊರಿಯಾ: ಭಾರತದ ಅನುಭವಿ ಷಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಮಂಗಳವಾರ ಆರಂಭವಾಗಲಿರುವ ಕೊರಿಯಾ ಓಪನ್‌ 500 ಟೂರ್ನಿಯಲ್ಲಿ ತಮ್ಮ ಅಭಿಯಾನ ಮುಂದುವರಿಸಲಿದ್ದು, ಪ್ರಸಕ್ತ ಋತುವಿನಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಭಾರತದ ಲಕ್ಷ್ಯ ಸೇನ್‌ ಸೇರಿ ಪ್ರಮುಖ ಆಟಗಾರರ ಹಿಂದೆಸರಿದಿರುವುದರಿಂದ ಈ ಟೂರ್ನಿ ಕೊಂಚ ಕಳೆಗುಂದಿದೆ. ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ವಿಜೇತೆಯಾಗಿರುವ ಸಿಂಧು ಪಾದದ ನೋವಿನಿಂದಾಗಿ ಐದು ತಿಂಗಳು ವಿಶ್ರಾಂತಿ ಪಡೆದು ಬಂದು ಅರ್ಧ ಋತು ಮುಗಿದರೂ ಒಂದೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಮ್ಯಾಡ್ರಿಡ್‌ನಲ್ಲಿ ನಡೆದ ಸ್ಪೇನ್ ಮಾಸ್ಟರ್ಸ್‌ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದೇ ಅವರ ಈ ಋತುವಿನ ಶ್ರೇಷ್ಠ ಸಾಧನೆಯಾಗಿದೆ. ‌‌ ಕೆನಡಾ ಓಪನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಮತ್ತು ಅಮೆರಿಕ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಹಂತದಲ್ಲಿ ಅವರು ಹೊರಬಿದ್ದಿದ್ದರು. ವಿಶ್ವದ 12ನೇ ಕ್ರಮಾಂಕದಲ್ಲಿರುವ ಸಿಂಧು, ಕೊರಿಯಾ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಚೈನೀಸ್‌ ತೈಪೆಯ ಪೈ ಯು ಪೊ ಅವರ ಸವಾಲನ್ನು ಎದುರಿಸಲಿದ್ದಾರೆ. ಸಿಂಧು ಅವರು ಈ ವಾರ ಹೊಸ ಕೋಚ್‌ ಆಗಿರುವ ಮಾಜಿ ಅಲ್‌ ಇಂಗ್ಲೆಂಡ್‌ ಚಾಂಪಿಯನ್‌ ಹಫಿಜ್‌ ಹಾಷಿಮ್‌ ಅವರೊಂದಿಗೆ ಇಲ್ಲಿಗೆ ಬಂದಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಮುಂದಿನ ವರ್ಷದ ಒಲಿಂಪಿಕ್ಸ್‌ಗೆ ಅರ್ಹತಾ ಅವಧಿ ಬರುವ ಏಪ್ರಿಲ್‌ನೊಳಗೆ ಮುಗಿಯಲಿದೆ. ಹೀಗಾಗಿ ಅಷ್ಟರೊಳಗೆ ರ‍್ಯಾಂಕಿಂಗ್‌ ಸುಧಾರಿಸಬೇಕಾಗಿದೆ. 2021ರ ವಿಶ್ವ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಶ್ರೀಕಾಂತ್‌ ಕೂಡ ಪ್ರಶಸ್ತಿಯ ಬರವನ್ನು ಎದುರಿಸುತ್ತಿದ್ದಾರೆ. ಈ ಋತುವಿನಲ್ಲಿ ಸ್ಪೇನ್ ಮಾಸ್ಟರ್ಸ್‌, ಮಲೇಷ್ಯಾ ಮಾಸ್ಟರ್ಸ್‌ ಮತ್ತು ಇಂಡೋನೇಷ್ಯಾ ಓಪನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್ ಪ್ರವೇಶಿದ್ದೇ ಅವರ ಉತ್ತಮ ಸಾಧನೆಯಾಗಿದೆ. ಇಲ್ಲಿ ಮೊದಲ ಸುತ್ತಿನಲ್ಲಿ ಅವರು ಜಪಾನ್‌ನ ಕೆಂಟೊ ಮೊಮೊಟಾ ಅವರನ್ನು ಎದುರಿಸಲಿದ್ದಾರೆ. ಐದನೇ ಶ್ರೇಯಾಂಕ ಪಡೆದಿರುವ ಭಾರತದ ಎಚ್‌.ಎಸ್‌. ಪ್ರಣಯ್‌ ಮೊದಲ ಸುತ್ತಿನಲ್ಲಿ ಬೆಲ್ಜಿಯಂನ ಜೂಲಿಯನ್‌ ಕರ‍್ರಗಿ ವಿರುದ್ಧ ಅಭಿಯಾನ ಆರಂಭಿಸುವರು. ಇಂಡೊನೇಷ್ಯಾ ಓಪನ್‌ನ ಪುರುಷರ ಡಬಲ್ಸ್‌ನ ಚಾಂಪಿಯನ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಮೇಲೆ ಎಲ್ಲರ ಗಮನ ನೆಟ್ಟಿದ್ದು, ಅವರು ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಸುಪಕ್ ಜೊಮ್ಕೋಹ್ ಮತ್ತು ಕಿಟ್ಟಿನುಪಾಂಗ್ ಕೆಡ್ರೆನ್ ಅವರನ್ನು ಎದುರಿಸುವರು. ‘ಭಾವನಾತ್ಮವಾಗಿ ಪ್ರಭಾವ ಬೀರಿದೆ’ ‘ಅಮೆರಿಕಾ ಓಪನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿನ ಸೋಲು ನಿರಾಸೆ ಮೂಡಿಸಿದೆ. ಮಾತ್ರವಲ್ಲ, ನನ್ನ ಮೇಲೆ ಭಾವನಾತ್ಮವಾಗಿ ಪರಿಣಾಮ ಬೀರಿದೆ’ ಎಂದು ಪಿ.ವಿ. ಸಿಂಧು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಸಿಂಧು ಅವರು ಚೀನಾದ ಗಾವೊ ಫಾಂಗ್ ಜೀ ಎದುರು 20–22, 13–21ರಿಂದ ಸೋತಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಫಾಂಗ್ ಜೀ ಅವರನ್ನು ಕೆನಡಾ ಓಪನ್‌ನಲ್ಲಿ ಮಣಿಸಿದ್ದರೂ ನನ್ನ ಕೆಲ ದೌರ್ಲಬ್ಯದಿಂದಾಗಿ ಎದುರು ಸೋಲಬೇಕಾಯಿತು. ಮುಂದೆ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದೇನೆ’ ಎಂದಿದ್ದಾರೆ. ‘ಕೊರಿಯಾ ಮತ್ತು ಜಪಾನ್‌ನಲ್ಲಿ ಮುಂಬರುವ ಟೂರ್ನಿಗಳನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇನೆ. ನಾನು ಹೋದಲ್ಲೆಲ್ಲಾ ಭಾರತೀಯ ಅಭಿಮಾನಿಗಳ ಬೆಂಬಲ ಮತ್ತು ಪ್ರೋತ್ಸಾಹ ದೊರಕಿದೆ. ಅದಕ್ಕಾಗಿ ನಾನು ಅಭಾರಿ’ ಎಂದು ಹೇಳಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.